ಲಕ್ಷೆ್ಮೕಶ್ವರ: ಕರೊನಾ ಹೆಮ್ಮಾರಿ ಹಿನ್ನೆಲೆಯಲ್ಲಿ ಕೃಷಿ ಕಾರ್ವಿುಕರ ಬದುಕು ಸಂಕಷ್ಟದಲ್ಲಿರುವುದನ್ನು ಗಮನಿಸಿದ ಸರ್ಕಾರ ನರೇಗಾ ಮತ್ತು ಜಲಾಮೃತ ಯೋಜನೆಯಡಿ ಉದ್ಯೋಗ ಕಲ್ಪಿಸಿದೆ. ಆ ಮೂಲಕ ರೈತರ ನೆರವಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದೆ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ತಾಲೂಕಿನ ಗೊಜನೂರ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೃಷಿ ಇಲಾಖೆಯಿಂದ ಇಳಿಜಾರು ಬದು ನಿರ್ಮಾಣ ಕಾಮಗಾರಿ ಪರಿಶೀಲನೆ ಮತ್ತು ಕೂಲಿಕಾರರಿಗಾಗಿ ಬುಧವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಗ್ರಾಮದ ಅಭಿವೃದ್ಧಿ ಹಾಗೂ ಬದುಕಿಗೆ ಆಸರೆ ಕಲ್ಪಿಸುವ ಮಹತ್ವಾಕಾಂಕ್ಷಿ ನರೇಗಾ ಯೋಜನೆಯ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಅಲ್ಲದೆ, ಕರೊನಾ ಹಿನ್ನೆಲೆ ಕೆಲಸದ ಸಮಯದಲ್ಲಿ ಪರಸ್ಪರ ಅಂತರ ಕಾಪಾಡಬೇಕು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದರು.
ನರೇಗಾ ಕೂಲಿ ಕಾರ್ವಿುಕರಿಗೆ ಕೂಲಿ 275 ರೂ. ಜತೆಗೆ 10 ರೂ. ಸಾಮಗ್ರಿಗಳ ಸವಕಳಿ ಖರ್ಚು ಎಂದು ನೀಡಲಾಗುತ್ತದೆ. ನರೇಗಾ ಯೋಜನೆಯಡಿ ಕೈಗೊಳ್ಳುವ ವಿವಿಧ ಕಾಮಗಾರಿಗಳಲ್ಲಿ ಹೆಚ್ಚು ಜನರು ತೊಡಗಿಸಿಕೊಳ್ಳುವ ಮೂಲಕ ನರೇಗಾ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಪಂ ಇಒ ಡಾ. ಎನ್.ಎಚ್. ಓಲೇಕಾರ ಹೇಳಿದರು.
ನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ಜಿಲ್ಲಾ ಉಪ ಕೃಷಿ ನಿರ್ದೇಶಕ ವೀರೇಶ ಹುನಗುಂದ ವೀಕ್ಷಿಸಿದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ ನರಸಮ್ಮನವರ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಲಲಿತಾ ಶಿವಳ್ಳಿ, ಮಲ್ಲೇಶಪ್ಪ ಲಮಾಣಿ, ರಮೇಶ ದನದಮನಿ, ನಿಂಗನಗೌಡ ಪಾಟೀಲ, ಶೇಖಣ್ಣ ಸೊರಟೂರ, ಸಿ.ಪಿ. ಮಾಡಳ್ಳಿ, ಪ್ರಕಾಶ ಬೆಂತೂರ, ಪಿ.ಕೆ. ಹೊನ್ನಪ್ಪನವರ, ಎ.ಸಿ. ಭಗವತಿ, ಶಿವಾನಂದ ಬಂಡಿವಡ್ಡರ, ಶೇಖರಗೌಡ ದೊಡ್ಡಗೌಡರ ಸೇರಿ ಗ್ರಾಪಂ ಸದಸ್ಯರು, ನರೇಗಾ ಸಂಬಂಧಿತ ಸಿಬ್ಬಂದಿ ಇದ್ದರು.
ಈ ವೇಳೆ 800ಕ್ಕೂ ಹೆಚ್ಚು ಕೃಷಿ ಕಾರ್ವಿುಕರು ಪರಸ್ಪರ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಕಾರ್ಯ ನಿರ್ವಹಿಸಿದರು. ಕಾರ್ವಿುಕರಿಗೆ ನೀರು, ನೆರಳು, ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ತಾಲೂಕು ಆರೋಗ್ಯ ಇಲಾಖೆಯಿಂದ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.
ತಾಪಂ ಎಂಎನ್ಆರ್ಇಜಿ ಸಹಾಯಕ ನಿರ್ದೇಶಕ ಕೃಷ್ಣಪ್ಪ ಧರ್ಮರ, ಪಿಡಿಒ ಶಿವಾನಂದ ಮಾಳವಾಡ, ಸರ್ಕಾರಿ ಪ್ರಾಢಶಾಲೆ ಮುಖ್ಯ ಶಿಕ್ಷಕ ರವಿ ಬೆಂಚಳ್ಳಿ ನಿರ್ವಹಿಸಿದರು.
16 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ
ಕೃಷಿ ಇಲಾಖೆಯು ಜಲಾಮೃತ ಯೋಜನೆಯಡಿ ಇಳಿಜಾರು ಬದುವು ನಿರ್ಮಾಣ (ದಿಬ್ಬದಿಂದ ಕಣಿವೆವರೆಗೆ) ಯಜ್ಞ ಆರಂಭಿಸಿದೆ. 16 ಕೋಟಿ ರೂ. ಯೋಜನಾ ವೆಚ್ಚದಲ್ಲಿ ತಾಲೂಕಿನ ಗೊಜನೂರ, ಯಳವತ್ತಿ, ಮಾಗಡಿ, ಅಕ್ಕಿಗುಂದ, ಹೊಳಪುರ ಸೇರಿ ಅಂದಾಜು 5 ಸಾವಿರ ಹೆಕ್ಟೇರ್ ಜಮೀನುಗಳಲ್ಲಿ ಇಳಿಜಾರು ಬದು, ಕೃಷಿ ಹೊಂಡ, ಎರೆಹುಳು ಘಟಕ ನಿರ್ಮಾಣ ಸೇರಿ ತೋಟಗಾರಿಕೆ, ಅರಣ್ಯ, ರೇಷ್ಮೆ ಇಲಾಖೆಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳಲಾಗುತ್ತದೆ. ರೈತರಿಗೆ ಮತ್ತು ಕೂಲಿಕಾರರ ನೆರವಿಗಾಗಿ ಈ ಯೋಜನೆ ಅತ್ಯಂತ ಉಪಯುಕ್ತವಾಗಿದೆ. ರೈತರ ಪಾಲಿನ ಮಹತ್ವಾಕಾಂಕ್ಷಿ ಕಾರ್ಯ ಇದಾಗಿದೆ. ಕೃಷಿ ಕಾರ್ವಿುಕರು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಜಿಲ್ಲಾ ಉಪ ಕೃಷಿ ನಿರ್ದೇಶಕ ವೀರೇಶ ಹುನಗುಂದ ಹೇಳಿದರು.