ಗೋಕರ್ಣ : ಲಾಕ್ಡೌನ್ ಸಂದರ್ಭದಲ್ಲಿ ನಿರ್ಗತಿಕರಿಗೆ ಮತ್ತು ಅಸಹಾಯಕರಿಗೆ ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ನೆರವು ನೀಡುವುದನ್ನು ನಿತ್ಯದ ಕಾಯಕವಾಗಿ ಮಾಡಿಕೊಂಡಿದೆ.
ಈ ಸಂಘಟನೆ 25ರಿಂದ 30 ಜನ ನಿರ್ಗತಿಕರಿಗೆ ನಿತ್ಯ ಊಟ ಒದಗಿಸುತ್ತ ಬಂದಿದೆ. ಜತೆಗೆ ಗೋಕರ್ಣ ಮತ್ತು ನಾಡುಮಾಸ್ಕೇರಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿ ವಾರ ಅಗತ್ಯ ವಸ್ತುಗಳ ಕಿಟ್ ವಿತರಿಸಿ ಸಂಕಷ್ಟದಲ್ಲಿದ್ದ ಸಂಸಾರಗಳ ಸಂತೋಷಕ್ಕೆ ಕಾರಣವಾಗಿದೆ.
ಗೋಕರ್ಣದಲ್ಲಿ ಬೀದಿ ಬದಿ ವ್ಯಾಪಾರ ಮಾಡಿ ಬದುಕುತ್ತಿದ್ದ ದಾವಣಗೆರೆ, ಹಾವೇರಿ ಮುಂತಾದ ಜಿಲ್ಲೆಗಳ 70ಕ್ಕೂ ಅಧಿಕ ಬಡವರಿಗೆ ಸ್ವಂತ ವೆಚ್ಚದಲ್ಲಿ ತಿಂಗಳ ರೇಷನ್ ಒದಗಿಸಿ ಅವರಿಗೆ ಆಸರೆಯಾಗಿ ನಿಂತಿದೆ. ಈ ಸೇವೆಯ ಮುಂಚೂಣಿಯಲ್ಲಿ ಸಂಘದ ಗೌರವಾಧ್ಯಕ್ಷ ಮೋಹನ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣಪತಿ ನಾಯ್ಕ, ಯುವ ಘಟಕದ ಅಧ್ಯಕ್ಷ ಕುಮಾರ ದೀವಟಿಗೆ, ವಿದ್ಯಾರ್ಥಿ ಘಟಕದ ಪುಷ್ಪಹಾಸ ಬಸ್ತೀಕರ, ಉದ್ಯಮಿ ಆರ್.ಜಿ. ಡಾಂಗೆ, ವಿನಾಯಕ ಉಪಾಧ್ಯ, ನಾಗರಾಜ ತಾಂಡೇಲ, ನಾಗೇಂದ್ರ ಪಡ್ತಿ, ವಸಂತ ಶೆಟ್ಟಿ, ಶಾರದಾ ಗೌಡ , ಮಲ್ಲಿಕಾರ್ಜುನ ಹೊನ್ನಾವರಕರ, ಕ್ಷೇತ್ರ ಪುರೋಹಿತ ವೇ. ಶ್ರೀಧರ ಗೋವಿಂದ ಭಟ್ಟ ಹಲವರಿದ್ದಾರೆ.
ಗೋಕರ್ಣ ಭಾಗದಲ್ಲಿ ಅನೇಕ ಸಂಘಟನೆಗಳು ಮತ್ತು ದಾನಿಗಳು ಕೈಜೋಡಿಸಿ ಸರ್ಕಾರದ ಶ್ರಮವನ್ನು ಹಗುರವಾಗಿಸಿದ್ದಾರೆ. ಈ ಪೈಕಿ ನಿತ್ಯ ಅನ್ನ ದಾಸೋಹ ಮಾಡಿದ ಸಾಧನೆ ಗೋಕರ್ಣ ಕರವೇ ಸಂಘಟನೆಯದಾಗಿದೆ. ಸಾರ್ವಜನಿಕ ಸಂಕಷ್ಟದಲ್ಲೂ ಇವರೆಲ್ಲರೂ ನೀಡಿದ ಸೇವೆ ಅಭಿನಂದನಾರ್ಹ. | ಮೇಘರಾಜ ನಾಯ್ಕ, ತಹಸೀಲ್ದಾರ್