ಮಾನ್ವಿ: ಒಣ ಮೆಣಸಿನಕಾಯಿ ಬೆಲೆ ಇಳಿಕೆಯಾಗಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ. ಕಡಿಮೆ ಬೆಲೆಗೇ ಮೆಣಸಿನಕಾಯಿ ಮಾರಾಟಕ್ಕೆ ರೈತರು ಮುಂದಾಗಿದ್ದಾರೆ.
ಕಳೆದ ಹಂಗಾಮಿನಲ್ಲಿ ಒಣ ಮೆಣಸಿನಕಾಯಿಗೆ ಉತ್ತಮ ಬೆಲೆ ಇದ್ದುದರಿಂದ ರೈತರು ಹೆಚ್ಚಿನ ಪ್ರದೇಶದಲ್ಲಿ ಬ್ಯಾಡಗಿ ಹಾಗೂ ಗುಂಟೂರು ಮೆಣಸಿನಕಾಯಿ ಬೆಳೆದಿದ್ದರು. ಆದರೆ, ಉತ್ತಮ ಬೆಲೆ ಇಲ್ಲದ ಕಾರಣಕ್ಕೆ ಎಸಿ ಗೋದಾಮಿನಲ್ಲಿ ಸಂಗ್ರಹಿಸಿ ಉತ್ತಮ ದರಕ್ಕಾಗಿ ಕಾಯುತ್ತಿದ್ದರು. ಆರು ತಿಂಗಳು ಕಳೆದರೂ ದರ ಏರಿಕೆ ಕಾಣದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಖರ್ಚು ಮಾಡಿದ ಹಣ ಬಂದರೆ ಸಾಕು ಎನ್ನುವ ಸ್ಥಿತಿಯಲ್ಲಿ ರೈತರಿದ್ದಾರೆ.
ತಾಲೂಕಿನಲ್ಲಿ 2500 ಹೆಕ್ಟೇರ್ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯಲಾಗಿದೆ. ರೈತರು ಬೆಲೆ ಏರಿಕೆಯಾಗಲಿದೆ ಎಂಬ ನಿರೀಕ್ಷೆಯೊಂದಿಗೆ ಎಸಿ ಗೋದಾಮುಗಳಲ್ಲಿ (ಕೋಲ್ಡ್ ಸ್ಟೋರೆಜ್) ಶೇಖರಣೆ ಮಾಡಿದ್ದಾರೆ. ಆದರೆ, ಬೆಲೆ ಕುಸಿತ ರೈತರನ್ನು ಕಂಗೆಡೆಸಿದೆ. 2023 ರಲ್ಲಿ ಬ್ಯಾಡಗಿ ಒಣ ಮೆಣಸಿನಕಾಯಿ ಕ್ವಿಂಟಾಲ್‌ಗೆ 60 ರಿಂದ 65 ಸಾವಿರ ರೂಪಾಯಿ ಇತ್ತು. ಇದೀಗ 12ರಿಂದ 13 ಸಾವಿರ ರೂಪಾಯಿಗೆ ಇಳಿದಿದೆ. ಕ್ವಿಂಟಾಲ್‌ಗೆ 22 ಸಾವಿರ ಇದ್ದ ಗುಂಟೂರು ಮೆಣಸಿನಕಾಯಿ 15 ಸಾವಿರ ರೂಪಾಯಿ ಇದೆ. ಹಿಂದಿನ ವರ್ಷಗಳಲ್ಲಿ ಇಳುವರಿಯೊಂದಿಗೆ ಬೆಲೆಯೂ ಹೆಚ್ಚಿತ್ತು. ಆದರೆ ಈ ಬಾರಿ ಇಳುವರಿಯೊಂದಿಗೆ ಬೆಲೆಯೂ ಕುಸಿತವಾಗಿದೆ.