ಜಿಲ್ಲೆ

ಸಂಕಷ್ಟದಲ್ಲಿ ಕಾರ್ಮಿಕರಿಗೆ ಸರ್ಕಾರದ ನೆರವು, ಜಿಲ್ಲಾ ಕಾರ್ಮಿಕ ಅಧಿಕಾರಿ ಎಚ್.ಆರ್. ನಾಗೇಂದ್ರ ಹೇಳಿಕೆ

ನೆಲಮಂಗಲ: ಸಂಕಷ್ಟದಲ್ಲಿರುವ ಶ್ರಮಿಕರಿಗೆ ಸರ್ಕಾರ ನೆರವು ನೀಡಿರುವುದು ಸಂತಸದ ವಿಷಯ ಎಂದು ಗ್ರಾಮಾಂತರ ಜಿಲ್ಲಾ ಕಾರ್ಮಿಕ ಅಧಿಕಾರಿ ಎಚ್.ಆರ್. ನಾಗೇಂದ್ರ ಹೇಳಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಕಾರ್ಮಿಕ ಇಲಾಖೆ ಮತ್ತು ನಗರಸಭೆ ಬುಧವಾರ ಆಯೋಜಿಸಿದ್ದ ಅಸಂಘಟಿತ ಕಾರ್ಮಿಕರ ದಾಖಲಾತಿ ಸಂಗ್ರಹಿಸುವ ಶಿಬಿರದಲ್ಲಿ ಮಾತನಾಡಿದರು.

ಲಾಕ್‌ಡೌನ್ ಹಿನ್ನೆಲೆ ಲಕ್ಷಾಂತರ ಮಂದಿ ಶ್ರಮಿಕರು ಸಂಕಷ್ಟಕ್ಕೆ ಒಳಗಾಗಿದ್ದರು. ಇದನ್ನು ಮನಗಂಡು ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ಒಂದು ಬಾರಿಯ ಪರಿಹಾರವಾಗಿ 2 ಸಾವಿರ ರೂ. ನೆರವು ನೀಡುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿ ಅವರ ನಿರ್ದೇಶನದಂತೆ 11 ಸಂಘಟಿತ ಕಾರ್ಮಿಕರ ಸಂಘಟನೆಗಳ ಪದಾಧಿಕಾರಿಗಳ ಸಭೆ ಹಮ್ಮಿಕೊಂಡು ವಿಚಾರ ತಿಳಿಸಲಾಗಿದೆ. ಜೂ.5 ರಿಂದ ಜು.20ರವರೆಗೂ ಆನ್‌ಲೈನ್‌ನಲ್ಲಿ ಆರ್ಜಿ ಸಲ್ಲಿಸಬಹುದಾಗಿದೆ ಎಂದರು.

ಜಿಲ್ಲಾಯಾದ್ಯಂತ 5,345ಕ್ಕೂ ಹೆಚ್ಚು ಅಸಂಘಟಿತ ಕಾರ್ಮಿಕರು ನೋಂದಣಿ ಮಾಡಿಸಿಕೊಂಡಿದ್ದಾರೆ. ಸೇವಾಸಿಂಧು ವೆಟ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ತಹಸೀಲ್ದಾರ್ ಕೆ. ಮಂಜುನಾಥ್ ಮಾತನಾಡಿ, ತಾಲೂಕು ಪಂಚಾಯಿತಿ, ಕಾರ್ಮಿಕ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ನಗರ, ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಕಸ ಸಂಗ್ರಹಣೆ ಮಾಡುವ ಆಟೋ ಮೂಲಕ ಪ್ರಚಾರ ಸೇರಿ ಕರಪತ್ರ ಹಂಚಿಸಲಾಗಿದೆ ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಗೆ http://www.sevasindhu.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಜೂ.5ರಿಂದ ತಾಲೂಕಿನಾದ್ಯಂತ 1,693ಮಂದಿ ಅಸಂಘಟಿತ ಕಾರ್ಮಿಕರು ಆನ್‌ಲೈನ್‌ಮೂಲಕ ನೊಂದಣಿ ಮಾಡಿಸಿಕೊಂಡಿದ್ದಾರೆ. ಅಸಂಘಟಿತ ಕಾರ್ಮಿಕರ ದಾಖಲಾತಿ ಸಂಗ್ರಹಿಸುವ ಶಿಬಿರದಲ್ಲಿ ಸುಮಾರು 527 ಮಂದಿ ಕಾರ್ಮಿಕರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ತಾಲೂಕು ಕಾರ್ಮಿಕ ಆರೋಗ್ಯ ನಿರೀಕ್ಷಕಿ ಸಿ.ಡಿ.ನಾಗರತ್ನಾ ತಿಳಿಸಿದರು.

ತಾಪಂ ಇಒ ಮೋಹನ್‌ಕುಮಾರ್, ನಗರಸಭೆ ಪೌರಾಯುಕ್ತ ಮಂಜುನಾಥ್, ರಾಜಸ್ವ ನಿರೀಕ್ಷಕ ಎ.ರವಿಕುಮಾರ್ ಮತ್ತಿತರರಿದ್ದರು.