ಜಿಲ್ಲೆ

ಸಂಕಷ್ಟದಲ್ಲಿ ಕಲಾವಿದರ ಬದುಕು

ಚಿತ್ರದುರ್ಗ: ದೇಶದ ಸಾಂಸ್ಕೃತಿಕ ರಾಯಭಾರಿಗಳಾಗಿರುವ ಕಲಾವಿದರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ಕಳವಳ ವ್ಯಕ್ತಪಡಿಸಿದರು.

ಶ್ರೀ ಸಿರಿ ಸಂಪಿಗೆ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ವೀರ ವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಲೆಯನ್ನೇ ನಂಬಿ ಬದುಕುತ್ತಿರುವ ಕಲಾವಿದರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ದುಡಿಮೆಗೆ ಅನ್ಯ ಮಾರ್ಗವಿಲ್ಲದ ಅವರನ್ನು ಸರ್ಕಾರ ಪ್ರೋತ್ಸಾಹಿಸಬೇಕಿದೆ ಎಂದರು.

ಸಾಹಿತಿ ಪರಮೇಶ್ವರಪ್ಪ ಕುದುರಿ, ಸಂಸ್ಥೆ ಕಾರ್ಯದರ್ಶಿ ಡಿ. ಶ್ರೀಕುಮಾರ್ ಮಾತನಾಡಿದರು. ಸಿಂಧು, ಹರ್ಷಿಣಿ, ಗಾನಶ್ರೀ ಅವರು ನೃತ್ಯಪ್ರದರ್ಶನ ನೀಡಿದರು. ಕೆ. ಪವಿತ್ರಾ, ಪವನ್‌ಕುಮಾರ್ ತಂಡದವರು ಸಂಗೀತಾ ಕಾರ್ಯಕ್ರಮ ನಡೆಸಿಕೊಟ್ಟರು.

ಬಾಲಪ್ರತಿಭೆ ಸೈಯದ್‌ಅಯಾನ್ ಸಂವಿಧಾನ ಪೀಠಿಕೆ ವಾಚಿಸಿದರೆ, ಬಾಲಕ ಹನಿಶ್‌ಪಾಟೀಲ್ ಗಾಂಧಾರ ಕಲೆ ಪ್ರದರ್ಶಿಸಿದರು. ಪ್ರತಿಭಾವಂತ ಮಕ್ಕಳು, ಕಲಾವಿದ ಗೌಸ್‌ಪೀರ್, ಮಾರ್ಗದರ್ಶಿ ಬಿ. ಮೋಹಿದ್ದಿನ್ ಖಾನ್ ಅವರನ್ನು ಗೌರವಿಸಲಾಯಿತು.

ಸಂಸ್ಥೆ ಪೋಷಕಿ ಕೆಂಚಮ್ಮ, ಆರಕ್ಷಕ ಇಲಾಖೆ ಬಾಬು, ಯೋಗ ಶಿಕ್ಷಕಿ ಹೇಮಲತಾ, ಜೈ ಭೀಮ್ ಕಾರ್ಯಕಾರಿ ಸಮಿತಿ ಮುರುಗನ್, ಶಿಲ್ಪಿ ಶಿವಕುಮಾರ್ ಇದ್ದರು. ಪವನ್‌ಕುಮಾರ್ ಪ್ರಾರ್ಥಿಸಿದರು.