ಜಿಲ್ಲೆ

ಸಂಕಷ್ಟದಲ್ಲಿ ಆಜಾದ್ ಕಾಲನಿ ಶ್ರಮಿಕರು

ಹುಬ್ಬಳ್ಳಿ: ನಗರದ ಕೇಶ್ವಾಪುರ ಆಜಾದ್ ಕಾಲನಿ ಸೀಲ್​ಡೌನ್ ಪ್ರದೇಶಗಳಲ್ಲಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರ ಕೂಲಿಗೂ ಕರೊನಾ ಕೊಡಲಿ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿ ಕಡು ಬಡವರು ಒಪ್ಪೊತ್ತಿನ ಊಟಕ್ಕೂ ಪರದಾಡುವಂಥ ಪರಿಸ್ಥಿತಿ ಎದುರಾಗಿದೆ.

ಕರೊನಾ ಸೋಂಕು ದೃಢವಾಗುತ್ತಿದ್ದಂತೆ ಜಿಲ್ಲಾಡಳಿತ 100 ಮೀ. ಸುತ್ತಮುತ್ತ ಬ್ಯಾರಿಕೇಡ್ ಅಳವಡಿಸಿ ಸೀಲ್​ಡೌನ್ ಮಾಡಿತ್ತು. ಪೊಲೀಸ್ ಕಣ್ಗಾವಲು ಹಾಕಿ ಯಾರೂ ಹೊರಗೆ ಹೋಗದಂತೆ, ಹೊರಗಿನವರು ಒಳಗೆ ಬಾರದಂತೆ ಕಟ್ಟೆಚ್ಚರ ಹೊರಡಿಸಿತ್ತು. ಮಹಾನಗರ ಪಾಲಿಕೆ ಮನೆ ಬಾಗಿಲಿಗೆ ತರಕಾರಿ ತಲುಪಿಸುತ್ತಿದೆಯಾದರೂ, ಅದು ದುಬಾರಿಯಾಗಿರುವುದರಿಂದ ಕೆಲ ಬಡವರು ಕೊಳ್ಳಲು ಸಶಕ್ತರಾಗಿಲ್ಲ.

‘ನಾನು ಮತ್ತೊಬ್ಬರ ಮನೆಯಲ್ಲಿ ಕಸ, ಮುಸುರಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೆ. ಕರೊನಾ ಬಂದ ಬಳಿಕ ತಿಂಗಳಿಂದ ಕೆಲಸಕ್ಕೆ ಹೋಗಿಲ್ಲ. ಆಜಾದ್ ಕಾಲನಿಯ ಬಾಲಕಿಗೆ ಕರೊನಾ ಸೋಂಕು ದೃಢಪಟ್ಟ ಬಳಿಕ ಸಂಪೂರ್ಣ ಬಂದ್ ಮಾಡಲಾಗಿದೆ. ಕೈಯಲ್ಲಿದ್ದ ಪುಡಿಗಾಸು ಖಾಲಿಯಾಗಿದೆ. ನಾಲ್ಕೈದು ದಿನ ಮನೆಯಲ್ಲಿದ್ದ ಸಾಮಗ್ರಿಗಳನ್ನು ಬಳಸಿ ಹೇಗೋ ಜೀವನ ಸಾಗಿಸಿದೆವು. ಆದರೆ, ನಂತರದ ದಿನಗಳು ಮಾತ್ರ ಸಂಕಷ್ಟದ ದಿನಗಳಾಗಿವೆ. ಸದ್ಯ ತರಕಾರಿ ಕೊಳ್ಳಲೂ ಹಣವಿಲ್ಲ. ಸಿಲಿಂಡರ್ ಖಾಲಿಯಾಗಿದೆ. ಸಿಲಿಂಡರ್​ಗೂ ಹಣವಿಲ್ಲ’ ಎಂದು ಆಜಾದ್ ಕಾಲನಿಯ ಮಹಿಳೆಯೊಬ್ಬರು ‘ವಿಜಯವಾಣಿ’ ಬಳಿ ನೋವು ತೋಡಿಕೊಂಡಿದ್ದಾರೆ.

ಮನೆಯಲ್ಲಿ ಹಾಸಿಗೆ ಹಿಡಿದ ತಾಯಿ ಇದ್ದು ಆಕೆಯ ಔಷಧ, ಹಾಲಿಗೂ ಹಣವಿಲ್ಲ. ದಿನಕ್ಕೆ ಒಂದು ಹೊತ್ತು ಊಟ ಮಾಡಿದರೆ ಹೆಚ್ಚಾಗಿದೆ. ಹೇಗಾದರೂ ಮಾಡಿ ಸರ್ಕಾರ ಕಣ್ಣು ತೆರೆದು ನಮ್ಮತ್ತ ನೋಡಬೇಕು. ಕನಿಷ್ಠ ಹಾಲು, ಕಿರಾಣಿ ಸಾಮಗ್ರಿಗಳನ್ನಾದರೂ ಪೂರೈಸಬೇಕು ಎಂದು ಕಣ್ಣೀರಾದರು.

ಬಿಸಿಲಲ್ಲಿ ಹಸುಗೂಸು, ಬಾಣಂತಿ: ಇಲ್ಲಿನ ಆಜಾದ್ ಕಾಲನಿ ಪಕ್ಕದ ಓಣಿಯ ಬಾಣಂತಿಯೊಬ್ಬರು ತಮ್ಮ 3 ತಿಂಗಳ ಕೂಸಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಸುಡು ಬಿಸಿಲಲ್ಲಿ ನಡೆದುಕೊಂಡೇ ಆಸ್ಪತ್ರೆಗೆ ತೆರಳಿದ್ದರು. ಆಟೋ, ಬಸ್ ಇಲ್ಲದ ಕಾರಣ ಅನಿವಾರ್ಯವಾಗಿ ನಡೆದುಕೊಂಡೇ ಹೋಗಿ ಬಂದೆ ಎಂದು ಬಾಣಂತಿ ಪತ್ರಿಕೆ ಬಳಿ ಹೇಳಿಕೊಂಡರು.

ಬ್ಯಾರಿಕೇಡ್ ಲೆಕ್ಕಕ್ಕಿಲ್ಲ: ಆಜಾದ್ ಕಾಲನಿಯ ಸುತ್ತಮುತ್ತಲಿನ ಕೆಲ ಜನರು ಇಲ್ಲಿನ ರಮೇಶ ಭವನದ ಬಳಿ ಅಳವಡಿಸಿರುವ ಬ್ಯಾರಿಕೇಡ್ ಸರಿಸಿ ಓಡಾಡುತ್ತಿದ್ದಾರೆ. ಪೊಲೀಸರು ಎಷ್ಟು ಹೇಳಿದರೂ ಕೇಳದೇ ಔಷಧ, ರೇಷನ್ ತರಬೇಕು, ಆಸ್ಪತ್ರೆ, ಎಟಿಎಂಗೆ ಹೋಗಬೇಕು ಎಂಬಿತ್ಯಾದಿ ನೆಪವೊಡ್ಡಿ ಬೀದಿಗೆ ಇಳಿಯುತ್ತಿದ್ದಾರೆ. ಇದರಿಂದ ಭದ್ರತೆಗೆ ನಿಯೋಜನೆಗೊಂಡ ಪೊಲೀಸರು ಸುಸ್ತಾಗಿದ್ದಾರೆ.

ಉಚಿತ ಹಾಲು, ದಿನಸಿ ವಿತರಿಸಿ: ಜಿಲ್ಲಾಡಳಿತ ದಾನಿಗಳಿಂದ ಸಂಗ್ರಹಿಸಿದ ದಿನಸಿ ಮತ್ತು ಸರ್ಕಾರ ನೀಡುವ ಉಚಿತ ಹಾಲನ್ನು ಸೀಲ್​ಡೌನ್ ಪ್ರದೇಶದ ಬಡವರಿಗೂ ಹಂಚಿಕೆ ಮಾಡಬೇಕು. ಆ ಮೂಲಕ ತಮ್ಮ ಸಂಕಷ್ಟಕ್ಕೆ ನೆರವಾಗಬೇಕು ಎಂದು ಆಜಾದ್ ಕಾಲನಿ ನಿವಾಸಿಗಳು ಆಗ್ರಹಿಸಿದ್ದಾರೆ.