ಶಿರಸಿ: ಕೋವಿಡ್- 19 ಸಂದರ್ಭದಲ್ಲಿಯೂ ರಾಜ್ಯ ಸರ್ಕಾರವು ಧಾರ್ವಿುಕ ಕ್ಷೇತ್ರದಲ್ಲಿ ಮೂಲ ಸೌಲಭ್ಯ ಕಲ್ಪಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಸ್ವಾದಿ ಜೈನ ಮಠದ ಶ್ರೀಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ನುಡಿದರು.
ಬುಧವಾರ ತಾಲೂಕಿನ ಸೋಂದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಾದಿ ದಿಗಂಬರ ಜೈನ ಮಠದ ಬಳಿ ಪ್ರವಾಸೋದ್ಯಮ ಇಲಾಖೆಯ 1.64 ಕೋಟಿ ರೂ. ವೆಚ್ಚದ ಯಾತ್ರಿ ನಿವಾಸ ನಿರ್ಮಾಣ ಕಾಮಗಾರಿಯ ಭೂಮಿಪೂಜೆ ಸಾನ್ನಿಧ್ಯವಹಿಸಿ ಅವರು ಆಶೀರ್ವದಿಸಿದರು. ಚಾರಿತ್ರಿಕ ಹಿನ್ನೆಲೆಯುಳ್ಳ ಸ್ವಾದಿ ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಲಾಗಿದೆ. ಕನ್ನಡ ಸಾಹಿತ್ಯಕ್ಕೆ ವಿಶೇಷ ಸಾಹಿತ್ಯ ಕೊಡುಗೆಯನ್ನೂ ನೀಡಿದೆ. ಇಂತಹ ಮಠದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದ್ದು, ಎಲ್ಲ ಆಯಾಮಗಳಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ಅಗತ್ಯ ಕಾಮಗಾರಿಗಳನ್ನು ತ್ವರಿತವಾಗಿ ಮಾಡಲಾಗುವುದು ಎಂದರು.
ವಿಧಾನಸಭಾಧ್ಯಕ್ಷರು ಭೂಮಿಪೂಜೆ ನೆರವೇರಿಸಿದರು. ತಾಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ, ಸದಸ್ಯ ನರಸಿಂಹ ಹೆಗಡೆ, ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಎನ್.ಹೆಗಡೆ, ಸೋಂದಾ ಗ್ರಾಪಂ ಅಧ್ಯಕ್ಷ ಮಂಜುನಾಥ ಭಂಡಾರಿ, ಮಠದ ಮುಖ್ಯಸ್ಥ ಮಾಣಿಕ್ಯ ಉಪಾಧ್ಯ ಇದ್ದರು. ನಂತರ ಹುಲೇಕಲ್ ಗ್ರಾಪಂ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ವಣಗೊಂಡ 50 ಲಕ್ಷ ರೂ. ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ್ ಭವನವನ್ನು ಉದ್ಘಾಟಿಸಲಾಯಿತು.
ಕೋವಿಡ್ -19 ಜತೆ ವಿವಿಧ ಸಂದರ್ಭಗಳಲ್ಲಿ ರಕ್ತ ಪರೀಕ್ಷೆಗೆ ಅನುಕೂಲವಾಗುವಂತೆ ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತವನ್ನು 19 ಬಗೆಯಲ್ಲಿ ಪರೀಕ್ಷೆ ನಡೆಸುವ ಕಾರ್ಯ ಜೂ.4ರಿಂದ ಆರಂಭವಾಗಲಿದೆ. ಇದರಿಂದ ರಕ್ತದ ಪರೀಕ್ಷಾ ವರದಿಗಳು ಬಹುಬೇಗ ಲಭಿಸಲು ಅನುಕೂಲವಾಗುತ್ತದೆ.| ಶಿವರಾಮ ಹೆಬ್ಬಾರ ಉಸ್ತುವಾರಿ ಸಚಿವರು
ಗೋಬರ್ ಧನ್ಗೆ ಚಾಲನೆ
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಗೋಬರ್ ಧನ್ ಯೋಜನೆಯನ್ನು ಪಿಪಿಪಿ (ಪಬ್ಲಿಕ್ ಪ್ರೈವೇಟ್ ಪಾರ್ಟನರ್ಷಿಪ್) ಮೂಲಕ ಅನುಷ್ಠಾನಗೊಳಿಸಲು ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಮುಂದಾಗಿದೆ. ಪ್ರಾಯೋಗಿಕವಾಗಿ ಆರಂಭಿಲಾಗುವ ಘಟಕದ ಕಾಮಗಾರಿಗೆ ಬುಧವಾರ ತಾಲೂಕಿನ ವಾದಿರಾಜ ಮಠದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹಾಗೂ ವಿಧಾನಸಭಾಧ್ಯಕ್ಷರು ಬುಧವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸಚಿವ ಹೆಬ್ಬಾರ ‘ಸಮುದಾಯಕ್ಕೆ ನೆರವಾಗುವ ಉದ್ದೇಶದಿಂದ ಜಾನುವಾರು ಸೆಗಣಿ, ಹಸಿ ಕಸ ಹೆಚ್ಚು ಉತ್ಪತ್ತಿಯಾಗುವ ಗೋಶಾಲೆ, ಮಠ, ಅನ್ನಛತ್ರ ಇಂತಹ ಸ್ಥಳಗಳಿಗೆ ಆದ್ಯತೆ ನೀಡಲಾಗಿದೆ. ಅಲ್ಲಿ ಲಭ್ಯವಾಗುವ ತ್ಯಾಜ್ಯ ಆಧರಿಸಿ, 60 ಕ್ಯೂಬಿಕ್ ಮೀಟರ್ ಗಾತ್ರದ 14.5 ಲಕ್ಷ ರೂ. ವೆಚ್ಚದ ಗೋಬರ್ ಗ್ಯಾಸ್ ಘಟಕ ನಿರ್ಮಾಣ ಆಗಲಿದೆ. ಶೇ 50:50 ಅನುಪಾತದಲ್ಲಿ ಯೋಜನಾ ವೆಚ್ಚ ಭರಿಸಲು ಯೋಜನೆಯ ನಿಯಮಾವಳಿಯಲ್ಲಿದೆ’ ಎಂದು ತಿಳಿಸಿದರು.