ಬಾದಾಮಿ ತಾಲೂಕಿನ ಹೆಬ್ಬಳ್ಳಿ ಗ್ರಾಮಕ್ಕೆ ನುಗ್ಗಿದ ಮಲಪ್ರಭಾ ನದಿ ನೀರು.  
ಜಿಲ್ಲೆ

ಸಂಕಷ್ಟಕ್ಕೆ ಸಿಲುಕಿದ ಅನ್ನದಾತರು…!

ಸಂತೋಷ ದೇಶಪಾಂಡೆ
ಬಾಗಲಕೋಟೆ: ಜಿಲ್ಲೆ ಹಾಗೂ ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಅನ್ನದಾತರು ಕಂಗಾಲ ಆಗಿದ್ದಾರೆ. ಮಳೆಯಿಂದ ಹಾನಿ ಒಂದು ಕಡೆಯಾದರೇ, ಬೆಣ್ಣೆ ಹಳ್ಳ ತುಂಬಿ ಹರಿದ ಪರಿಣಾಮ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಬಾದಾಮಿ, ಗುಳೇದಗುಡ್ಡ ತಾಲೂಕಿನ ವಿವಿಧೆಡೆ ನದೀ ತೀರದ ಬೆಳೆಗಳು ಜಲಾವೃತ ಆಗಿವೆ.!!

ಜಿಲ್ಲೆಯಲ್ಲಿ ಬಾಗಲಕೋಟೆ, ಮುಧೋಳ, ಜಮಖಂಡಿ, ಇಳಕಲ್ಲ, ಹುನಗುಂದ, ತೇರದಾಳ, ರಬಕವಿ-ಬನಹಟ್ಟಿ ಸೇರಿದಂತೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವುರಣ ಆರ್ಭಟಕ್ಕೆ ರೈತರು ಅಕ್ಷರಶಃ ಕಣ್ಣೀರು ಹಾಕುತ್ತಿದ್ದಾರೆ. ಮುಂಗಾರಿ ಹಂಗಾಮಿನಲ್ಲಿ ಬಿತ್ತನೆ ಮಾಡಿ ಕೈಗೆ -Àಸಲು ಪಡೆಯುವ ನಿರೀಕ್ಷೆಯಲ್ಲಿದ್ದ ರೈತರ ಬಾಯಿ ತುತ್ತು ಬರದಂತಾಗಿದೆ. ಹಿಂಗಾರು ಹಂಗಾಮಿನಲ್ಲಿ ಕಳೆದ ಒಂದು ವಾರದ ಹಿಂದೆ ಬಿತ್ತನೆ ಮಾಡಿದ ವಿವಿಧ ಬೆಳೆಗಳು ಕೂಡಾ ಮಳೆಗೆ ಸಂಕಷ್ಟಕ್ಕೆ ಸಿಲುಕಿವೆ.

ಕಟಾವು ಮಾಡಲು ಈರುಳ್ಳಿ ಬೆಳೆ ಕಿತ್ತು ಇಟ್ಟಿದ್ದ ರೈತರಿಗೆ ಮಳೆ ಹೊಡೆತಕ್ಕೆ ತೀವ್ರ ಸಮಸ್ಯೆ ಉಂಟಾಗಿದೆ. ಇಳಕಲ್ಲ ತಾಲೂಕಿನ ಮರಟಗೇರಿ ಗ್ರಾಮದಲ್ಲಿ ರಾಮಣ್ಣ ಗೌಂಡಿ ಎಂಬುವರ ಮೂರು ಎಕರೇ ಪ್ರದೇಶದಲ್ಲಿ ಈರುಳ್ಳಿ ಬೆಳೆ ಮಳೆಗೆ ಆಹುತಿಯಾಗಿದೆ. ಲಕ್ಷಾಂತರ ರೂ ಬೆಳೆ ಹಾನಿಯಾಗಿದೆ. ಬೆಳೆದ ಬೆಳೆ ಕೈಗೆ ಸಿಗದೇ ರೈತ ಕಂಗಾಲ ಆಗಿದ್ದಾರೆ. ಸರ್ಕಾರದಿಂದ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ಹುಬ್ಭಳ್ಳಿ, ಧಾರವಾಡ ಭಾಗದಲ್ಲಿ ಸುರಿದ ಭಾರಿ ಮಳೆಗೆ ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿದೆ. ಈ ಹಳ್ಳ ನೀರು ಮಲಪ್ರಭಾ ನದಿಗೆ ಜೋಡಣೆಯಾದ ಪರಿಣಾಮ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಬಾದಾಮಿ ತಾಲೂಕಿನ ಗೋವನಕೊಪ್ಪ ಕಿರು ಸೇತುವೆ ಜಲಾವೃತವಾಗಿದೆ. ನೀರಲಗಿ -ಹೊಳೆ ಆಲೂರು ಕಿರು ಸೇತುವೆ ಕೂಡಾ ಜಲಾವೃತಗೊಂಡಿದ್ದು, ಸಂಪರ್ಕ ಕಡಿತಗೊಂಡಿದೆ.

ನದಿ ತೀರದ ಹೆಬ್ಬಳ್ಳಿ, ಮುಮರಡ್ಡಿಕೊಪ್ಪ, ಜಕನೂರು, ನೀರಲಗಿ, ಕಾತರಕಿ, ತಮಿನಾಳ, ಮಣ್ಣೂರು, ಖ್ಯಾಡ, ಚೊಳಚಗುಡ್ಡ, ಶಿರಬಡಗಿ, ಮಂಗಳೂರು, ಶಿವಯೋಗ ಮಂದಿರ, ನೇಲವಗಿ, ನಂದಿಕೇಶ್ವರ, ಕಾಟಪೂರ, ಮಂಗಳಗುಡ್ಡ ಗ್ರಾಮಗಳ ಜಮೀನುಗಳು ಜಲಾವೃತಗೊಂಡಿವೆ. ಸದ್ಯ ಮೆಕ್ಕೆಜೋಳ, ಕಬ್ಬು, ಹತ್ತಿಗೆ ಬಹಳ ತೊಂದರೆಯಾಗಿದೆ. ಕಟಾವು ಹಂತಕ್ಕೆ ಬಂದಿರುವ ಮೆಕ್ಕೆಜೋಳ ನೀರು ನುಗ್ಗಿದರೆ ತೆನೆ ಹಾಳಾಗಿ -Àಸಲು ನಷ್ಟವಾಗಿದೆ. ನೀರಲಗಿ ಗ್ರಾಮದ ಹೊಳೆಯಪ್ಪಗೌಡ ಬಸನಗೌಡ ಗೌಡರ ಅವರ ೪ ಎಕರೇ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ನೀರಿನಲ್ಲಿ ಮುಳಗಿದೆ. ಕಟಾವು ಮಾಡಿ ಹೊರಗೆ ಇಟ್ಟಿದ್ದ ಬೆಳೆಯೇ ಕೈಗೆ ಸೇರದಂತಾಗಿದೆ. ಇದರಿಂದ ಕಣ್ಣೀರು ಇಡುತ್ತಲೇ ಸರ್ಕಾರದ ಪರಿಹಾರಕ್ಕೆ ಮೊರೆ ಹೋಗಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಬೆಳೆದ ಈರುಳ್ಳಿ, ಕಬ್ಬು, ಮೆಕ್ಕೆ ಜೋಳ, ಹತ್ತಿ, ಶೇಂಗಾ ಸೇರಿದಂತೆ ಅಂದಾಜು ೩೦೦ ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಹಿಂಗಾರು ಹಂಗಾಮಿನಲ್ಲಿ ಬೆಳೆ ಜೋಳ, ಕಡಲೆ ಬೆಳೆಗಳು ಮಳೆ ಹೊಡೆತಕ್ಕೆ ನಲುಗಿ ಹೋಗಿವೆ. ೪೦ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಹಾನಿ ಉಂಟಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಹಾನಿ ಪ್ರಮಾಣ ಇನ್ನು ಜಾಸ್ತಿ ಆಗುವ ಲಕ್ಷಣ ಗೋಚರಿಸಿದೆ. ಕೋಟ್ಯಂತರ ರೂ. ನಷ್ಟ ಆಗುವ ಸಾಧ್ಯತೆ ಇದ್ದು, ಸರ್ಕಾರದಿಂದ ಪರಿಹಾರ ನೀಡಬೇಕು ಎನ್ನುವುದು ರೈತರ ಆಗ್ರಹ.