ಬೀದರ್: 72ನೇ ಸಂವಿಧಾನ ದಿನಾಚರಣೆ ನಿಮಿತ್ತ ಜನಪರ ಹೋರಾಟಗಳ ಹಾಗೂ ರೈತರ ಹಕ್ಕುಗಳ ರಕ್ಷಣೆಗಾಗಿ ಬೃಹತ್ ಸಂಕಲ್ಪ ಸಮಾವೇಶ ಜ. 26ರಂದು ಸಂಜೆ 5ಕ್ಕೆ ನಗರದ ಡಾ.ಅಂಬೇಡ್ಕರ್ ವೃತ್ತದ ಹತ್ತಿರ ಆಯೋಜಿಸಲಾಗಿದೆ. ಸಮಾವೇಶ ಅದ್ದೂರಿ ಹಾಗೂ ಅರ್ಥಪೂರ್ಣ ಆಚರಿಸಲು ಭಜ್ರಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಮಾವೇಶ ಸಮಿತಿ ಅಧ್ಯಕ್ಷ ಬಾಬುರಾವ ಪಾಸ್ವಾನ್, ಸಲಹಾ ಸಮಿತಿಯ ಸದಸ್ಯ ಅನೀಲಕುಮಾರ ಬೆಲ್ದಾರ್ ಹೇಳಿದರು.
ಸಂಕಲ್ಪ ಸಮಾವೇಶ ಯಾವುದೇ ರಾಜಕೀಯ ಪಕ್ಷದ ವಿರುದ್ಧ ಅಥವಾ ಪರವಾಗಿ ಅಲ್ಲ. ಸಂವಿಧಾನ ಬಲಪಡಿಸಲು ಹಾಗೂ ರೈತ ವಿರೋಧಿ ಕಾಯ್ದೆಗಳ ಬಗ್ಗೆ ಜನಜಾಗೃತಿ ಮೂಡಿಸಲು ಸಂಘಟಿಸಲಾಗಿದೆ. ವಿವಿಧೆಡೆಯಿಂದ ಹತ್ತು ಸಾವಿರಕ್ಕೂ ಹೆಚ್ಚು ಜನರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಗುರುವಾರ ಇಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಾರಾಷ್ಟ್ರದ ವಿಚಾರವಾದಿ ಸುಭಾನ್ ಶೇಕ್, ನವೆಹಲಿಯ ಐಎಎಸ್ ಅಕಾಡೆಮಿಯ ಡಾ. ಶಿವಕುಮಾರ ಅಕ್ಕ, ಆದಿವಾಸಿಗಳ ಮೂಲನಿವಾಸಿ ಸಂಘಟನೆಯ ತಾರಾಮೋಹನ್, ಹಿರಿಯ ಸಾಹಿತಿ ಡಾ. ಮೀನಾಕ್ಷಿ ಬಾಳಿ ಸೇರಿದಂತೆ ಜನಪ್ರತಿನಿಧಿಗಳು, ಗಣ್ಯರು, ಚಿಂತಕರು ಪಾಲ್ಗೊಳ್ಳುವರು. ದಲಿತ ಸಂಘಟನೆಗಳ ಒಕ್ಕೂಟ, ಸಂವಿಧಾನ ಸಂರಕ್ಷಣಾ ಸಮಿತಿ, ಗೊಂಡ ಮತ್ತು ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಕೂಡಲೇ ವಾಪಸ್ ಪಡೆಯಬೇಕು. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಕೇಂದ್ರ ನೀಡುತ್ತಿದ್ದ ಶಿಷ್ಯವೇತನ ಹಿಂದಿನಂತೆ ಯಥಾವತ್ತಾಗಿ ನೀಡಬೇಕು. ಎಸ್ಸಿಪಿ, ಟಿಎಸ್ಪಿ ಅನುದಾನ ಬೇರೆ ಇಲಾಖೆಗೆ ವರ್ಗಾಯಿಸಕೂಡದು. ಖಾಸಗಿ ಕ್ಷೇತ್ರದಲ್ಲಿ ಎಸ್ಸಿ, ಎಸ್ಟಿ, ಓಬಿಸಿಯವರಿಗೆ ಮೀಸಲಾತಿ ಸೌಲಭ್ಯ ಒದಗಿಸಬೇಕು. ಸಂವಿಧಾನದ ಆಶಯಗಳನ್ನು ಸಂಪೂರ್ಣವಾಗಿ ಜಾರಿಗೆ ತರಬೇಕು ಎಂಬಿತ್ಯಾದಿ ಹಕ್ಕೊತ್ತಾಯಗಳು ಸಮಾವೇಶದ ಮೂಲಕ ಮಂಡಿಸಲಾಗುವುದು ಎಂದು ವಿವರಿಸಿದರು.
ಹುಮನಾಬಾದ್ ತಾಪಂ ಅಧ್ಯಕ್ಷರಾದ ಹಿರಿಯ ಮುಖಂಡ ರಮೇಶ ಡಾಕುಳಗಿ, ಪ್ರಮುಖರಾದ ಅಂಬಾದಾಸ ಗಾಯಕವಾಡ್, ಕಲ್ಯಾಣರಾವ ಭೋಸ್ಲೆ, ಶಾಲಿವಾನ ಬಡಿಗೇರ್, ಶ್ರೀಪತರಾವ ದೀನೆ, ಅರುಣ ಕುದರೆ, ರಾಜಕುಮಾರ ಬನ್ನೇರ್, ಅಶೋಕ ಮಾಳಗೆ, ಎಂ.ಪಿ.ಮುದಾಳೆ, ಶಿವಕುಮಾರ ನೀಲಿಕಟ್ಟಿ, ತುಕರಾಮ ಚಿಮಕೋಡ, ಸುಬ್ಬಣ್ಣ ಕರಕನಳ್ಳಿ, ಅವಿನಾಶ ದೀನೆ ಇತರರಿದ್ದರು.
ಸಂವಿಧಾನದ ಆಶಯವು ಸಮಗ್ರವಾಗಿ ಜಾರಿಗೆ ತರುವ ಹಾಗೂ ರೈತ, ದಲಿತ ವಿರೋಧಿ ಕಾಯ್ದೆ ಜಾರಿಗೆ ತಡೆಯುವ ನಿಟ್ಟಿನಲ್ಲಿ ಸಮಾವೇಶ ಆಯೋಜಿಸಲಾಗಿದೆ. ಕೋವಿಡ್ ನಿಯಮಗಳನ್ನು ಅನುಸರಿಸಿ ಕಾರ್ಯಕ್ರಮ ಮಾಡುತ್ತಿದ್ದು, 10 ಸಾವಿರ ಜನ ಸೇರುವ ನಿರೀಕ್ಷೆಯಿದೆ.| ಬಾಬುರಾವ ಪಾಸ್ವಾನ್ಸಂಕಲ್ಪ ಸಮಾವೇಶ ಸಮಿತಿ ಅಧ್ಯಕ್ಷ