ಜಿಲ್ಲೆ

ಶ್ರೇಷ್ಠ ವೃಕ್ಷಗಳಿಗೂ ದೀಕ್ಷಾ ಸಂಸ್ಕಾರ ಅಗತ್ಯ

ಸಕಲೇಶಪುರ: ಪೂಜಿಸುವ ಪ್ರತಿಯೊಂದು ವೃಕ್ಷಕ್ಕೂ ದೀಕ್ಷಾ ಸಂಸ್ಕಾರ ಅಗತ್ಯ ಇದೆ ಎಂದು ಕಿರಿಕೊಡ್ಲಿಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.


ಪಟ್ಟಣದ ಮಲೆನಾಡು ವೀರಶೈವ ಸಮಾಜ ಗುರುವೇಗೌಡ ಕಲ್ಯಾಣ ಮಂಟಪ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಬಿಲ್ಪಪತ್ರೆ ಮರಕ್ಕೆ ದೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದು ಧರ್ಮದಲ್ಲಿ ಬಿಲ್ವ, ಅರಳಿ, ಬನ್ನಿ, ಆಲದ ಮರಗಳನ್ನು ಪೂಜೆಗೆ ಅರ್ಹ, ಶ್ರೇಷ್ಠ ವೃಕ್ಷಗಳೆಂದು ಪುರಾತನ ಕಾಲದಿಂದ ಪೂಜಿಸಲಾಗುತ್ತಿದೆ. ಈ ಮರಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಿದ ವೇಳೆ ಇವುಗಳ ಶ್ರೇಷ್ಠತೆಯ ಅರಿವು ಜಗತ್ತಿಗೆ ತಿಳಿಯಲ್ಪಟ್ಟಿದೆ. ಬಿಲ್ವಮರದಲ್ಲಿ ಶಿವ ನೆಲೆಸಿದ್ದಾನೆ ಎಂಬ ಪ್ರತೀತಿ ಇದ್ದು ಬಿಲ್ವ ಮರ ಶಿವನ ಪೂಜೆಯಲ್ಲಿ ಅತ್ಯಂತ ಪಾವಿತ್ರೃ ಪಡೆದಿದೆ. ಹಿಂದುಗಳು ಹೀಗೆ ಪೂಜಿಸುವ ಪ್ರತಿಯೊಂದು ವೃಕ್ಷಕ್ಕೂ ದೀಕ್ಷಾ ಸಂಸ್ಕಾರ ನೀಡುವ ಅಗತ್ಯ ಇದೆ. ಹೀಗೆ ಮಾನವ ಸಂಸ್ಕಾರವಂತನಾದಾಗ ಮಾತ್ರ ಸಮಾಜ ಸಂಪದ್ಭರಿತವಾಗಿರಲಿದೆ ಎಂದರು.


ಕಲ್ಲಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಸಂಸ್ಕಾರ, ಸಂಸ್ಕೃತಿ ಹೊಂದಿದ ವ್ಯಕ್ತಿಗೆ ಈ ಜಗತ್ತಿನ ಎಲ್ಲೆಡೆಯೂ ಗೌರವ ದೊರೆಯಲಿದೆ. ಮನುಷ್ಯ ತಾನು ಮಾಡುವ ಕಾಯಕದಿಂದ ಮಹಾತ್ಮನಾಗುತ್ತಾನೆ. ಮಹಾತ್ಮರಾಗಿರುವವರೆಲ್ಲ ಒಂದು ಕಾಲದಲ್ಲಿ ಸಾಮಾನ್ಯ ವ್ಯಕ್ತಿಗಳೇ. ಜಗತ್ತಿನ ಸೃಷ್ಟಿಯಲ್ಲಿರುವ ಯಾವುದೇ ವಸ್ತುಗಳಿಗೆ ದೀಕ್ಷೆ ಮೂಲಕ ಸಂಸ್ಕಾರ ನೀಡಿದರೆ ಅಂಥ ವಸ್ತುಗಳು ಪೂಜೆಗೆ ಅರ್ಹ ಎಂಬುದು ಹಿಂದು ಧರ್ಮದಲ್ಲಿರುವ ಅಂಶ. ಇನ್ನು ಸಕಲವನ್ನು ಬಲ್ಲ ಮಾನವ ಸಂಸ್ಕಾರವಂತನಾಗಲು ಮಾತ್ರ ಹಿಂದೇಟು ಹಾಕುತ್ತಿದ್ದು ಕ್ಷುಲ್ಲಕ ಮೋಜಿಗಾಗಿ ಜೀವನವನ್ನೇ ವ್ಯರ್ಥವಾಗಿ ಕಳೆಯುತ್ತಿದ್ದಾನೆ. ಹಿಂದು ಧರ್ಮದಲ್ಲಿನ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಮಾನವ ಸಂಸ್ಕಾರವಂತನಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.


ಬಿಲ್ವಮರಕ್ಕೆ ವಿಧ್ಯುಕ್ತವಾಗಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುವುದರ ಮೂಲಕ ಸಂಸ್ಕಾರ ನೀಡಲಾಯಿತು.
ಮಲೆನಾಡು ವೀರಶೈವ ಸಮಾಜದ ಮುಖಂಡರಾದ ಬಿ.ಡಿ.ಬಸವಣ್ಣ, ವಿದ್ಯಾಶಂಕರ್, ಶಶಿಧರ್, ಆನೇಮಹಲ್ ಬಸವಣ್ಣ ಇತರರು ಇದ್ದರು.