ಬಾಗಲಕೋಟೆ ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಬಸವೇಶ್ವರ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಹಾಗೂ ಬಸವೇಶ್ವರ ಕಲಾ ಮಹಾವಿದ್ಯಾಲಯ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಲೇಜು ಉಪನ್ಯಾಸಕರ ಶೈಕ್ಷಣಿಕ ಸಮಾವೇಶವನ್ನು ವಿಜಯಪುರ ಮತ್ತು ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮೀಜಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಶಾಸಕ ವೀರಣ್ಣ ಚರಂತಿಮಠ, ಬಿವಿವಿ ಸಂಘದ ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಪ್ರಾಚಾರ್ಯರಾದ ಡಾ.ವಿ. ಎಸ್.ಕಟಗಿಹಳ್ಳಿಮಠ, ಬಿ.ಎಚ್.ಆರ್.ಡಿ ನಿರ್ದೇಶಕರಾದ ಎಸ್.ಆರ್. ಮನಹಳ್ಳಿ ಇದ್ದರು. 
ಜಿಲ್ಲೆ

ಶ್ರೇಷ್ಠ ಭಾರತ ನಿರ್ಮಾಣದ ಶಕ್ತಿ ಶಿಕ್ಷಕರಲ್ಲಿದೆ

ಬಾಗಲಕೋಟೆ: ಶಿಕ್ಷಕರೇ ಒಂದು ಸದೃಢ ದೇಶ ನಿರ್ಮಾಣದ ಹರಿಕಾರರು. ಶಿಕ್ಷಕರು ಬದಲಾಗದಿದ್ದರೆ ಶೈಕ್ಷಣಿಕ ನೀತಿಗಳಿಂದ ಶಿಕ್ಷಣ ಮಟ್ಟ ಸುಧಾರಿಸದು. ಭಾರತದಲ್ಲಿ ಅಂತರಾಷ್ಟ್ರೀಯ ಶಿಕ್ಷಣ ನಿಯಮಗಳನ್ನು ಅನ್ವಯ ಮಾಡಿಕೊಳ್ಳಲಾಗುತ್ತಿದೆ. ಆದರೆ ಭಾರತ ಶಿಕ್ಷಣ ವ್ಯವಸ್ಥೆ ಭಿನ್ನವಾಗಿದ್ದು. ಅವುಗಳಿಂದ ಇಲ್ಲಿಯ ಶಿಕ್ಷಣ ಸಮಸ್ಯೆ ನಿವಾರಿಸಲು ಸಾಧ್ಯವಿಲ್ಲ ಎಂದು ವಿಜಯಪುರ ಮತ್ತು ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸ್ವಾಮಿಜಿ ಹೇಳಿದರು.
ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಬಸವೇಶ್ವರ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಹಾಗೂ ಬಸವೇಶ್ವರ ಕಲಾ ಮಹಾವಿದ್ಯಾಲಯ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಲೇಜು ಉಪನ್ಯಾಸಕರ ಶೈಕ್ಷಣಿಕ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ವಿಮಾನ ಶಾಸ್ತ್ರ, ಪ್ರಣಾಳ ಶಿಶು ಜನನ, ವಿಜ್ಞಾನ ಮೂಲ, ಪ್ರಥಮ ಹಡಗು ನಿರ್ಮಾಣ ಇವೆಲ್ಲವು ಹುಟ್ಟಿದ್ದು ಭಾರತದಲ್ಲಿಯೇ ಎಂಬುದಕ್ಕೆ ಶಾಸ್ತ್ರಗಳು ಸಾಕ್ಷಿಯಾಗಿವೆ. ಆದರೆ ಜಾತಿ ಸಮಸ್ಯೆಯ ಹೆಸರಿನಲ್ಲಿ ಭಾರತದ ಅಭಿವೃದ್ಧಿ ಅಳೆಯಲಾಗುತ್ತಿದೆ. ಇದು ದುರಾದೃಷ್ಟಕರ ಸಂಗತಿ. ೧೮ನೇ ಶತಮಾನದ ಪೂರ್ವ ಭಾರತದಲ್ಲಿಯೂ ಜಾತಿಯತೆ ಇತ್ತು, ಆಗಲೂ ದೇಶ ಸಂಪದ್ಭರಿತವಾಗಿತ್ತು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
ಶಿಕ್ಷಕರಲ್ಲಿ ಭೋಧನಾ ವ್ಯವಸ್ಥೆ, ಸ್ವ ಆಲೋಚನೆ ಇಲ್ಲದೇ ಇರುವುದು ಅಭಿವೃದ್ಧಿಯ ಕುಂಠಿತಕ್ಕೆ ಕಾರಣ. ಆದ್ದರಿಂದ ಸನ್ನಿವೇಶಗಳನ್ನು ತೀಕ್ಷ್ಣ ಅವಲೋಕನ ಮಾಡುವ ಕೌಶಲ ಬೆಳಸಿಕೊಳ್ಳಿ. ವಿದ್ಯಾರ್ಥಿಗಳಲ್ಲಿ ಸ್ವವಿವೇಚನೆಯ ಸಾಮರ್ಥ್ಯ ಬೆಳಸಿ. ಅದರಿಂದ ಮಾತ್ರ ಹೊಸ ಹೊಸ ಅಭಿವೃದ್ಧಿ ಆಲೋಚನೆಗಳು ಬೆಳೆಯಲು ಸಾಧ್ಯ ಎಂದು ಹೇಳಿದರು.
ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ, ಸಮಾಜ ಅಭಿವೃದ್ಧಿ ಶಿಕ್ಷಣದ ಗುರಿಯಾಗಬೇಕು. ಕಟ್ಟಡ ಮತ್ತು ಸೌಲಭ್ಯಗಳಿದ್ದರೆ ಗುಣಮಟ್ಟ ಶಿಕ್ಷಣವಾಗಲಾರದು. ಕೌಶಲ ಮತ್ತು ಗುಣಮಟ್ಟವಿರುವ ಶಿಕ್ಷಕರಿದ್ದರೇ ಮಾತ್ರ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಸಾಧ್ಯ. ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಚಟುವಟಿಕೆ ನಡೆಯಬೇಕು. ಆದರೆ ಇಂಗ್ಲೀಷ ಮೊರೆ ಹೊಗುತ್ತಿರುವುದು ಅಸಹಾಯಕತೆಯ ಮತ್ತೊಂದು ರೂಪ ಎಂದು ಬೇಸರ ವ್ಯಕ್ತಪಡಿಸಿದರು.
ಇಲ್ಲಿಯವರೆಗೂ ಶಿಕ್ಷಣ ಅಭಿವೃದ್ಧಿ ಮತ್ತು ಗುಣಮಟ್ಟ ಹೆಚ್ಚಿಸಲು ಹಲವಾರು ನೀತಿಗಳನ್ನು ಜಾರಿಮಾಡಲಾಗಿದೆ. ಆದರೆ ಯಾವುದೇ ಬದಲಾವಣೆಯಾಗಲಿಲ್ಲ. ಈಗ ಜಾರಿಯಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗಬೇಕಾದರೆ ಶಿಕ್ಷಕರ ಭೋದನಾ ವ್ಯವಸ್ಥೆ ಬದಲಾವಣೆಯಾಗಬೇಕಿದೆ. ಜಾತಿಯತೆ, ಭ್ರಷ್ಟಾಚಾರ, ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅವುಗಳನ್ನು ತಡೆಯುವ ಸಾಮರ್ಥ್ಯ ಶಿಕ್ಷಕರಲ್ಲಿದೆ. ಅದನ್ನು ಅರ್ಥಮಾಡಿಕೊಳ್ಳಬೇಕು. ಇತಿಹಾಸವನ್ನು ತಿಳಿದುಕೊಳ್ಳುವುದರ ಜೊತೆಗೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಇದರಿಂದ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಬಿವಿವಿ ಸಂಘದ ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಪ್ರಾಚಾರ್ಯ ಡಾ.ವಿ. ಎಸ್.ಕಟಗಿಹಳ್ಳಿಮಠ, ಬಿ.ಎಚ್.ಆರ್.ಡಿ ನಿರ್ದೇಶಕರಾದ ಎಸ್.ಆರ್. ಮನಹಳ್ಳಿ ಸೇರಿದಂತೆ ವಿವಿಧ ಕಾಲೇಜಿನ ಪ್ರಾಚಾರ್ಯರರು ಮತ್ತು ಪ್ರಾದ್ಯಾಪಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.