ಹಾಸನ: ಕಳೆದ 15 ದಿನಗಳಿಂದ ರಾಜ್ಯ ಸೇರಿದಂತೆ ರಾಷ್ಟ್ರಾದ್ಯಂತ ಸದ್ದು ಮಾಡುತ್ತಿರುವ ಪೆನ್‌ಡ್ರೈವ್ ಪ್ರಕರಣ ಇದೀಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹೊಂದಿದ್ದ ಸಂಸದ ಪ್ರಜ್ವಲ್ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್, ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಜತೆಗೆ ಇರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಈ ವಿಡಿಯೋಗಳ ಹಂಚಿಕೆಗೆ ಸಂಬಂಧಿಸಿದಂತೆ ಕಾರ್ತಿಕ್ ಕಳೆದ ಒಂದು ವಾರದ ಹಿಂದೆ ‘ನಾನು ದೇವರಾಜೇಗೌಡ ಅವರೊಬ್ಬರಿಗೆ ಮಾತ್ರ ಅಶ್ಲೀಲ ವಿಡಿಯೋಗಳ ಒಂದು ಕಾಪಿ ನೀಡಿದ್ದು ಬಿಟ್ಟರೆ ಕಾಂಗ್ರೆಸ್‌ನ ಯಾವೊಬ್ಬ ಮುಖಂಡರಿಗೂ ನೀಡಿರಲಿಲ್ಲ,’ ಎಂದು ವಿಡಿಯೋ ಮಾಡಿ ಹಂಚಿಕೊಂಡಿದ್ದರು.
ಅದಾದ ಬಳಿಕ ಬಿಜೆಪಿ ಮುಖಂಡ ದೇವರಾಜೇಗೌಡ, ‘ಕಾರ್ತಿಕ್ ನನಗೆ ಒಂದು ಕಾಪಿ ನೀಡಿದ್ದು ನಿಜ. ಅದೇ ರೀತಿ ಆತ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಸೇರಿದಂತೆ ಕಾಂಗ್ರೆಸ್ ಮುಖಂಡರಿಗೂ ಒಂದು ಕಾಪಿ ನೀಡಿರಬಹುದು. ಏಕೆಂದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರ್ತಿಕ್ ಶೇಯಸ್ ಪರವಾಗಿ ಕೆಲಸ ಮಾಡಿದ್ದ. ಈ ವಿಡಿಯೋಗಳ ಹಂಚಿಕೆಗೂ ನನಗೂ ಸಂಬಂಧವಿಲ್ಲ. ಇದರ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೈವಾಡವಿರಬಹುದು,’ ಎಂದು ನೇರವಾಗಿ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ್ದ ಶ್ರೇಯಸ್ ಪಟೇಲ್, ‘ಒಮ್ಮೆ ಮಾತ್ರ ಜಮೀನು ವಿಚಾರವಾಗಿ ಕಾರ್ತಿಕ್ ನನ್ನನ್ನು ಭೇಟಿಯಾಗಿದ್ದರು. ಅದಾದ ಮೇಲೆ ಕಾರ್ತಿಕ್ ನನಗೆ ಸಿಕ್ಕಿಲ್ಲ. ಫೋನ್ ಮಾಡಿಲ್ಲ’ ಎಂದು ಸ್ಪಷ್ಟನೆ ನೀಡಿದ್ದರು. ಆದರೆ, ಇದೀಗ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರೊಂದಿಗೆ ಕಾರ್ತಿಕ್ ಇರುವ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಕೆಲ ದಿನಗಳ ಹಿಂದೆ ಕಾರ್ತಿಕ್, ಪುಟ್ಟರಾಜು ಅಲಿಯಾಸ್ ಪುಟ್ಟಿ ಅವರು ಶ್ರೇಯಸ್ ಪಟೇಲ್ ಅವರನ್ನು ಹೊಳೆನರಸೀಪುರದ ಅವರ ನಿವಾಸದಲ್ಲೇ ಭೇಟಿಯಾಗಿದ್ದಾರೆ. ಶ್ರೇಯಸ್ ಪಟೇಲ್ ಅವರು, ಕಾರ್ತಿಕ್, ಪುಟ್ಟರಾಜು ಜತೆಗೆ ಕೈ ಕೈ ಹಿಡಿದು ನಿಂತಿರುವ ಫೋಟೋಗಳು ಹರಿದಾಡುತ್ತಿದ್ದು, ಪೆನ್‌ಡ್ರೈವ್ ಬಹಿರಂಗ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಮಂಗಳವಾರ ಇದೇ ವಿಷಯವಾಗಿ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಸುದ್ದಿಗಾರರೊಂದಿಗೆ, ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಪ್ರಜ್ವಲ್ ರೇವಣ್ಣನ ಡ್ರೈವರ್ ಕಾರ್ತಿಕ್ ಯಾವುದೋ ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ಭೇಟಿಯಾಗಿದ್ದರು. ಅದಾದ ಬಳಿಕ ಭೇಟಿಯಾಗಿಲ್ಲ ಎಂದಿದ್ದರು. ಆದರೆ, ಅವರು ಮತ್ತು ಕಾರ್ತಿಕ್ ಜೊತೆಗಿರುವ ಹಲವು ಫೋಟೋಗಳು ವೈರಲ್ ಆಗುತ್ತಿದ್ದು ಶ್ರೇಯಸ್ ನಿನ್ನೆ ನೀಡಿದ ಹೇಳಿಕೆ ಬಗ್ಗೆ ಗೊಂದಲ ಮೂಡಿಸುತ್ತಿದೆ.
ಗ್ರೂಪ್ ಫೋಟೋನಲ್ಲಿ ಅವರಿಬ್ಬರನ್ನು ಗಮನಿಸಬಹುದು ಮತ್ತು ಪುಟ್ಟರಾಜು ಮನೆಯಲ್ಲಿ ಸಹ ಅವರಿಬ್ಬರು ಇರುವುದನ್ನು ನೋಡಬಹುದು. ಹೊಳೆನರಸೀಪುರದ ಶ್ರೇಯಸ್ ಅವನ ಮನೆಯಲ್ಲಿ ಶ್ರೇಯಸ್ ಊಟ ಮಾಡುತ್ತಿದ್ದರೆ ಕಾರ್ತಿಕ್ ಸೇರಿದಂತೆ ಉಳಿದವರೆಲ್ಲ ಡೈನಿಂಗ್ ಟೇಬಲ್ ಸುತ್ತ ನಿಂತು ನೋಡುತ್ತಿದ್ದಾರೆ. ಇನ್ನೊಂದು ಫೋಟೋದಲ್ಲಿ ಶ್ರೇಯಸ್, ಕಾರ್ತಿಕ್ ಮತ್ತು ಇನ್ನೊಬ್ಬ ವ್ಯಕ್ತಿ ಸ್ನೇಹಿತರ ಹಾಗೆ ಕೈ ಕೈ ಹಿಡಿದು ಫೋಟೋ ತೆಗೆಸಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಂತಿದೆ.