ಜಿಲ್ಲೆ

ಶ್ರೀಸಿದ್ದಪ್ಪಾಜಿ ದೇಗುಲ ಹುಂಡಿಯಲ್ಲಿ 33,59 ಲಕ್ಷ ರೂ. ಸಂಗ್ರಹ

ಕೊಳ್ಳೇಗಾಲ: ತಾಲೂಕಿನ ಚಿಕ್ಕಲ್ಲೂರು ಶ್ರೀಸಿದ್ದಪ್ಪಾಜಿ ದೇವಾಲಯ ಹುಂಡಿ ಎಣಿಕೆ ಬುಧವಾರ ನಡೆದಿದ್ದು, ಕಳೆದ 13 ದಿನಗಳಲ್ಲಿ 33,59,732 ರೂ. ಕಾಣಿಕೆ ಸಂಗ್ರಹವಾಗಿದೆ.

ಜಿಲ್ಲಾಧಿಕಾರಿಗಳ ಆದೇಶ,ಉಪವಿಭಾಗಾಧಿಕಾರಿ ಗೀತಾ ಹುಡೇದ ನಿರ್ದೇಶನದಂತೆ ತಹಸಿಲ್ದಾರ್ ಮಂಜುಳಾ ನೇತೃತ್ವದಲ್ಲಿ ಮತ್ತು ಪೊಲೀಸ್ ಅಧಿಕಾರಗಳ ಬೆಂಗಾವಲಿನಲ್ಲಿ ಬುಧವಾರ ಬೆಳಗ್ಗೆ 8 ರಿಂದ ರಾತ್ರಿ 11.30 ರವರೆಗೆ ಎಣಿಕೆ ಪ್ರಕ್ರಿಯೆ ನಡೆಯಿತು. ಜ.6 ರಿಂದ 10 ರವರಗೆ ಶ್ರೀ ಚಿಕ್ಕಲ್ಲೂರು ಜಾತ್ರಾ ಮಹೋತ್ಸವ ನಡೆದಿದ್ದು, ಐದು ದಿನಗಳ ಜಾತ್ರೆಯಲ್ಲಿ ಲಕ್ಷಾಂತರ ಮಂದಿ ಪಾಲ್ಗೊಂಡು ತಮ್ಮ ಹರಕೆಗಳನ್ನು ತೀರಿಸಿ ಹುಂಡಿಗೆ ಕಾಣಿಕೆ ಹಾಕಿದ್ದರು.

ಇದೇ ಮೊದಲು ಹಣದ ಮಾಹಿತಿ : ಈ ಹಿಂದೆ ಮಠದ ಆಡಳಿತ ವರ್ಗವೇ ಭಕ್ತರು ಹಾಕಿದ ಕಾಣಿಯ ಹುಂಡಿಯ ಲೆಕ್ಕಚಾರ ನೋಡಿಕೊಳ್ಳುತ್ತಿತ್ತು. ಇದರಿಂದಾಗಿ ಹಣದ ಮಾಹಿತಿ ಸಾರ್ವಜನಿಕರಿಗೆ ತಿಳಿಯುತ್ತಿರಲಿಲ್ಲ. ಆದರೆ, ಇತ್ತೀಚೆಗೆ ದೇವಾಲಯದಲ್ಲಿ ಬೊಪ್ಪೇಗೌಡನ ಪುರದ ಪೀಠಾಧಿಪತಿ ಶ್ರೀ ಜ್ಞಾನಾನಂದ ರಾಜೇ ಅರಸ್ ಹಾಗೂ ಶ್ರೀ ಭರತ್ ರಾಜೇ ಅರಸ್ ಈ ಎರಡು ಗುಂಪಿನ ನಡುವೆ ಏರ್ಪಟಿದ್ದ ಮುಸುಕಿನ ಗುದ್ದಾಟದ ಹಿನ್ನೆಲೆ ಜಾತ್ರಾ ಸಂಬಂಧ ನಡೆದ ಸಭೆ ಬಳಿಕ ಜಿಲ್ಲಾಧಿಕಾರಿಗಳ ಆದೇಶದಂತೆ ತಹಸೀಲ್ದಾರ್ ಮಂಜುಳಾ ದೇವಾಲಯ 8 ಹುಂಡಿಗಳಿಗೆ ಜ. 5ರಂದು ಸೀಲ್ ಮಾಡಿದ್ದರು. ಹುಂಡಿ ಹಣದ ಎಣಿಕೆಯನ್ನು ತಾಲೂಕು ಆಡಳಿತವೇ ನಿರ್ವಹಿಸಿರುವುದ್ದರಿಂದ ಜಾತ್ರೆ ಸಮಯದಲ್ಲಿ ಭಕ್ತರು ಹುಂಡಿಯೊಳಗೆ ಹಾಕಿರುವ ಕಾಣಿಕೆ ಮೊತ್ತ ಎಣಿಕೆಯಿಂದ ತಿಳಿದಿದೆ. ಎಣಿಕೆಯು ವಿಡಿಯೋ ಕ್ಯಾಮಾರಾ ಕಣ್ಗಾವಲಿನಲ್ಲಿ ನಡೆದಿದ್ದು ಹುಂಡಿಯಲ್ಲಿ 3 ಗ್ರಾಂ. ಚಿನ್ನದ ತಾಳಿ ಹಾಗೂ 33,59,732 ರೂ. ನಗರದು ಕಾಣಿಕೆ ರೂಪದಲ್ಲಿ ಸಂಗ್ರಹವಾಯಿತು. ಬಳಿಕ ಹಣವನ್ನು ದೇವಸ್ಥಾನದ ಟ್ರಸ್ಟ್‌ನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಯಿತು.

ಭಕ್ತರ ಕೋರಿಕೆ ಪತ್ರ: ಶ್ರೀ ಸಿದ್ದಪ್ಪಾಜಿ ದರ್ಶನ ಪಡೆದ ಮೂವರು ಭಕ್ತರು ತಮ್ಮ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಪತ್ರ ಬರೆದು ಹುಂಡಿಯಲ್ಲಿ ಹಾಕಿರುವುದು ಹುಂಡಿ ಎಣಿಕೆ ಪ್ರಕ್ರಿಯೆ ವೇಳೆ ಬೆಳಕಿಗೆ ಬಂದಿದೆ. ಈ ಪೈಕಿ ಒಬ್ಬ ಭಕ್ತೆ ಬರೆದಿರುವ ಪತ್ರದಲ್ಲಿ ನನ್ನ ಗಂಡ ತಪ್ಪು ದಾರಿಯನ್ನು ಹಿಡಿದಿದ್ದಾನೆ. ಅವನನ್ನು ಒಳ್ಳೆ ದಾರಿಯಲ್ಲಿ ನಡೆಸಪ್ಪ. ನನ್ನ ಗಂಡನ ಅಕ್ಕ ಸರಿ ಇಲ್ಲ. ಅವಳನ್ನು ನನ್ನ ಗಂಡನಿಂದ ದೂರ ಮಾಡಪ್ಪ ಎಂದು ಬೇಡಿಕೊಂಡಿದ್ದಾಳೆ. ಮಾತ್ರವಲ್ಲದೆ, ನಾನು ನನ್ನ ಗಂಡನೊಂದಿಗೆ ಚೆನ್ನಾಗಿ ಬಾಳಬೇಕು. ನನಗೆ ಮನನನ್ನು ಕರುಣಿಸು. ನನ್ನ ಮಗನನ್ನು ನಿನ್ನ ಶಿಶು ಮಗನಾಗಿ ಮಾಡುತ್ತೇನೆ ಎಂದು ಕೋರಿಕೆ ಸಲ್ಲಿಸಿದ್ದಾರೆ. ಇನ್ನೊಬ್ಬ ಭಕ್ತ ನಾವು ಮನೆ ಕೆಲಸ ಮಾಡಿಸುವುದಕ್ಕೆ ತೊಂದರೆ ಕೊಡುತ್ತಿರುವ ಪಕ್ಕದ ಮನೆಯವರಿಗೆ ಬುದ್ಧಿ ಕಲಿಸು. ನಮ್ಮ ಮನೆ ನಿರ್ಮಾಣಕ್ಕೆ ಯಾರಿಂದಲೂ ತೊಂದರೆ ಆಗದಂತೆ ಮಾಡು ಎಂದು ಪ್ರಾರ್ಥಿಸಿದ್ದಾರೆ. ಮತ್ತೊಬ್ಬ ಭಕ್ತೆ ತನ್ನ ಮಗನಿಗೆ ಎಲ್ಲಾದರೂ ಒಳ್ಳೆಯ ವಧುವನ್ನು ದೊರಕಿಸಿ ಲಗ್ನ ಮಾಡಿಸಪ್ಪ ಎಂದು ಭೇಡಿ ಕೊಂಡಿದ್ದಾರೆ.

ಹುಂಡಿ ಎಣಿಕೆ ವೇಳೆ ತಹಸೀಲ್ದಾರ್ ಎಂ.ಮಂಜುಳಾ, ಗ್ರಾಮಾಂತರ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಆರ್.ಮಂಜುನಾಥ್, ಎಸ್‌ಬಿಐ(ಎಡಿಬಿ) ಶಾಖಾ ವ್ಯವಸ್ಥಾಪಕ ಮಹೇಶ್, ಗ್ರಾಮ ಲೆಕ್ಕಿಗರಾದ ಶಾಂತರಾಜು, ರಾಕೇಶ್ ಮರಾಠ್, ಲಾವಣ್ಯ, ಪ್ರದೀಪ್, ಅನಿಲ್ ಕುಮಾರ್, ಹೇಮಾ, ಜ್ಞಾನೇಶ್ವರಿ, ಮಹೇಶ್ವರಿ, ಶ್ರೀಧರ್, ಭೀಮಪ್ಪ ಮುಧೋಳ್, ಮಮತಶ್ರೀ, ಮಹೇಶ್, ಚಂದನ್, ನೌಕರರಾದ ಉಷಾ, ವಿನುತಾ, ಸುಲೋಚನಾ, ಕುಮಾರ, ಮನೋಹರ್, ಪ್ರಮೀಳಾದೇವಿ ಇತರರು ಇದ್ದರು.