ಜಿಲ್ಲೆ

ಶ್ರೀಶೈಲ ಮಲ್ಲಿಕಾರ್ಜುನನ ಸನ್ನಿಧಿಯಲ್ಲಿ ಅತಿರುದ್ರಯಾಗ

ಮೈಸೂರು: ಅವಧೂತ ದತ್ತಪೀಠದ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ ಆಂಧ್ರಪ್ರದೇಶದಲ್ಲಿರುವ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀಶೈಲ ಮಲ್ಲಿಕಾರ್ಜುನನ ಸನ್ನಿಧಿಯಲ್ಲಿ ಅತಿರುದ್ರಯಾಗ ಆರಂಭಿಸಿದರು.
ಶ್ರೀಶೈಲದಲ್ಲಿರುವ ಛತ್ರಪತಿ ಶಿವಾಜಿ ಸ್ಫೂರ್ತಿ ಕೇಂದ್ರದ ಬಳಿಯ ತೆಲುಗು ವಿಶ್ವವಿದ್ಯಾಲಯದ ಮೈದಾನದಲ್ಲಿ ಜ.17 ರಿಂದ ಆರಂಭವಾಗಿರುವ ಅತಿರುದ್ರ ಯಾಗ ಜ. 27ರವರೆಗೆ ನೆರವೇರಲಿದೆ.
ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಶ್ರೀಗಳ ನೇತೃತ್ವದಲ್ಲಿ ಈ ಹಿಂದೆ ನಡೆದಿದ್ದ ಅತಿರುದ್ರಯಾಗದ ಬಳಿಕ ಈಗ ಶ್ರೀಶೈಲದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಅತಿರುದ್ರಯಾಗ ಇದಾಗಿದೆ.
ಇತ್ತೀಚೆಗಷ್ಟೇ ನಗರದಲ್ಲಿ 80ನೇ ವರ್ಧಂತಿ ಆಚರಿಸಿಕೊಂಡಿದ್ದ ಶ್ರೀಗಣಪತಿ ಸಚ್ಚಿದಾನಂದ ಸ್ವಾಮೀಜಿ, ಇದೀಗ ಸಹಸ್ರ ಚಂದ್ರಮಾನ ದರ್ಶನವಾದ ಹಿನ್ನೆಲೆಯಲ್ಲಿ ತಮಗೆ ಗುರು ದೀಕ್ಷೆ ನೀಡಿದ ಶ್ರೀಶೈಲದಲ್ಲಿ ಅತಿರುದ್ರ ಯಾಗ ಮಾಡುತ್ತಿದ್ದಾರೆ. ಒಟ್ಟಾರೆ ಶ್ರೀಗಳ ನೇತೃತ್ವದಲ್ಲಿ ನಾಲ್ಕು ಅತಿರುದ್ರ ಯಾಗ ನಡೆದಿದ್ದು, ಇದರಲ್ಲಿ ಎರಡು ಬಾರಿ ಯಾಗ ಮೈಸೂರಿನಲ್ಲಿ ನಡೆಸಿದ್ದರು.
ಮೌನಿ ಅಮಾವಾಸ್ಯೆ ಅಂಗವಾಗಿ ಜ.21ರಂದು ಆಗಮ ಪಂಡಿತರ ವೇದೋದ್ಘೋಷದ ನಡುವೆ ಯಜ್ಞಕ್ಕೆ ಪೂರ್ಣಾಹುತಿ ಅರ್ಪಿಸಲಾಯಿತು. ನಂತರ ನಡೆದ ಗುರುವಂದನ ಕಾರ್ಯಕ್ರಮದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದರು.
ಅತಿರುದ್ರ ಯಾಗದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಮಹಾರಾಷ್ಟ್ರದ ಸಹಸ್ರಾರು ಭಕ್ತರು ಭಾಗವಹಿಸುತ್ತಿದ್ದು, ನಿತ್ಯವೂ ಸಂಜೆ ಶ್ರೀಗಳಿಂದ ಪ್ರಚವನ ನೀಡುತ್ತಿದೆ. ಆಶ್ರಮದ ಕಿರಿಯ ಶ್ರೀದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಇತರರು ಇದ್ದರು.