ಶ್ರವಣಬೆಳಗೊಳ: ಇದೇ ತಿಂಗಳ 23 ರಂದು ಜಿನೈಕ್ಯರಾದ ಶ್ರೀ ಕ್ಷೇತ್ರದ ಪರಮಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೆ ಶ್ರೀಲಂಕಾದ ಭಾರತೀಯ ರಾಯಭಾರ ಕಚೇರಿಯಲ್ಲಿ ಶುಕ್ರವಾರ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ಪುಷ್ಪ ನಮನ ಸಲ್ಲಿಸಲಾಯಿತು.
ಶ್ರೀಲಂಕಾದ ಶ್ರೀ ಸ್ವಾಮಿ ವಿವೇಕಾನಂದ ಕಲ್ಚರಲ್ ಸೆಂಟರ್‌ನಲ್ಲಿ ಭಾರತೀಯ ರಾಯಭಾರ ಕಚೇರಿಯ ಇಂಡಿಯನ್ ಕಲ್ಚರಲ್ ಸೆಂಟರ್‌ನ ಡೈರೆಕ್ಟರ್ ಜನರಲ್, ಪ್ರೊ.ಅನ್‌ಕುರನ್ ದತ್ತಾ ಅವರ ಉಪಸ್ಥಿತಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ, ಮೊದಲಿಗೆ ಸ್ವಾಮೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಬಳಿಕ ಎರಡು ನಿಮಿಷ ಮೌನ ಆಚರಿಸಲಾಯಿತು.
ನಂತರ ಮಾತನಾಡಿದ ದತ್ತಾ ಅವರು, ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಕರ್ನಾಟಕದ ಜೈನಕಾಶಿ ಎಂದೇ ಖ್ಯಾತಿ ಪಡೆದಿರುವ ಶ್ರವಣಬೆಳಗೊಳ ಮಠದ ಪೀಠಾಧ್ಯಕ್ಷರಾಗಿ ಹತ್ತು ಹಲವು ಮಾದರಿಯಾದ ಮಹೋನ್ನತ ಕಾರ್ಯ ಮಾಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಜೈನ ತೀಥರ್ಂಕರರು ಸಾರಿದ ಅಹಿಂಸಾ ಪರಮೋಧಮರ್ಃ ಎಂಬ ತತ್ವವನ್ನು ವಿಶ್ವಮಟ್ಟಕ್ಕೆ ಸಾರುವಲ್ಲಿ ಸ್ವಾಮೀಜಿ ಅವರ ಪಾತ್ರ ದೊಡ್ಡದಿದೆ ಎಂದು ಗುಣಗಾನ ಮಾಡಿದರು.
ಹಾಗೆಯೇ ಶ್ರವಣಬೆಳಗೊಳ ಭಗವಾನ್ ಬಾಹುಬಲಿಯ ಜೊತೆಗೆ ಪರಮಪೂಜ್ಯರಿಂದಲೂ ವಿಶ್ವ ವಿಖ್ಯಾತಿ ಪಡೆದಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು, ಇದರ ಜೊತೆಗೆ ಸಾಹಿತ್ಯ, ಸಾಂಸ್ಕೃತಿಕ, ಆಧ್ಯಾತ್ಮ, ಧಾರ್ಮಿಕ ಹಾಗೂ ಸಾಮಾಜಿಕವಾಗಿ ಮಹತ್ತರವಾದ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ನಮ್ಮ ದೇಶದ ಪತ್ರಕರ್ತರು ಸ್ವಾಮೀಜಿ ಅವರ ಬಗ್ಗೆ ಮೌಲ್ಯಯುತ ಮಾಹಿತಿ ನೀಡಿದ ನಂತರ, ಅಗಲಿದ ಶ್ರೀಗಳನ್ನು ಸ್ಮರಿಸುವ ಕಾರ್ಯಕ್ರಮ ಮಾಡಿದ್ದು, ಇದರಲ್ಲಿ ನಾನು ಭಾಗಿಯಾಗಿ ಮೇರು ಸಂತರಿಗೆ ನುಡಿ ನಮನ ಸಲ್ಲಿಸಿದ್ದು ಸ್ಮರಣೀಯ ಕ್ಷಣ ಎಂದರು.
ಏಷಿಯನ್ ಮೀಡಿಯಾ ಅಂಡ್ ಕಲ್ಚರಲ್ ಅಸೋಷಿಯನ್(ಆಮ್‌ಕಾ) ಛೇರ‌್ಮನ್ ಉಪುಲ್ ಜನಕ ಜಯಸಿಂಘೇ ಮಾತನಾಡಿ, ಸ್ವಾಮೀಜಿ ಅವರು ಶ್ರೀಲಂಕಾ ಪತ್ರಕರ್ತರ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು.
ಶ್ರವಣಬೆಳಗೊಳ ಜೈನಮಠ ಮತ್ತು ಶ್ರೀಲಂಕಾದ ಪತ್ರಕರ್ತರ ನಡುವೆ ಸೇತುವೆಯಾಗಿ ಹೆಚ್.ಬಿ.ಮದನಗೌಡ ಇದ್ದ ಕಾರಣದಿಂದ ಸ್ವಾಮೀಜಿ ಅವರು ನಮಗೆ ತುಂಬಾ ಹತ್ತಿರವಾಗಿದ್ದರು. ಸ್ವಾಮೀಜಿ ಅವರಿಗೆ ನಮ್ಮನ್ನು ಪರಿಚಯಿಸಿ ಮದನಗೌಡರು ಪವಿತ್ರ ಬಾಂಧವ್ಯ ಬೆಸೆಯಲು ಕಾರಣರಾಗಿದ್ದಾರೆ ಎಂದು ಕೊಂಡಾಡಿದರು.
2008 ರ ಮಹಾ ಮಸ್ತಕಾಭಿಷೇಕ ಸೇರಿದಂತೆ ಬೇರೆ ಬೇರೆ ಸಂದರ್ಭಗಳಲ್ಲೂ ಕೂಡ, ಶ್ರೀಲಂಕಾ ಪತ್ರಕರ್ತರು ಶ್ರವಣಬೆಳಗೊಳಕ್ಕೆ ಭೇಟಿ ನೀಡಿದ್ದೆವು. ಪ್ರಾಕೃತ ವಿಶ್ವ ವಿದ್ಯಾನಿಲಯ ಇನ್ನಿತರ ಕಾರ್ಯಚಟುವಟಿಕೆಗಳಿ ಶ್ರೀಗಳು ನಮ್ಮನ್ನು ಬರಮಾಡಿಕೊಂಡು ಸತ್ಕರಿಸಿದ್ದರು. ಶ್ರೀ ಗಳೊಂದಿಗಿನ ಅವಿನಾಭಾವ ಸಂಬಂಧವನ್ನು ನಾವೆಂದೂ ಮರೆಯಲಾರೆವು ಎಂದು ನೆನಪು ಮಾಡಿಕೊಂಡರು.
ಈ ಸಂದರ್ಭದಲ್ಲಿ ಆಮ್‌ಕಾ ಕಾರ್ಯದರ್ಶಿ ಪತುಂ ವಿಕ್ರಮಾರ್ಥನೆ, ಶ್ರೀಲಂಕಾ ದೂರದರ್ಶನ ಕೇಂದ್ರ ಅಧಿಕಾರಿ ಸುಭಾಷಿಣಿ ಡಿಸಿಲ್ವಾ ಮತ್ತು ಪ್ರಮುಖ ಪತ್ರಕರ್ತರು ಹಾಗೂ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಹಾಜರಿದ್ದರು.
ವಿಶೇಷ ಎಂದರೆ ಭಾರತದ ಅದರಲ್ಲೂ ಕರ್ನಾಟಕದ ಸ್ವಾಮೀಜಿಯೊಬ್ಬರು ವಿಧಿವಶರಾಗಿದ್ದಕ್ಕೆ ಶ್ರೀಲಂಕಾದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಅವರನ್ನು ನೆನಪು ಮಾಡಿಕೊಂಡಿರುವುದು, ಅವರ ಸಾಧನೆಯನ್ನು ಸ್ಮರಿಸಿರುವುದು ಇದೇ ಮೊದಲಾಗಿದೆ.