ಬಾಗಲಕೋಟೆ: ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರದ ಹೆಸರಿನಲ್ಲಿ ಏರ್ ಗನ್ ಬಳಿಕೆ ಮಾಡಿದ್ದಾರೆ ಎನ್ನುವ ಆರೋಪದ ಮೇಲೆ ಶ್ರೀರಾಮಸೇನೆಯ ೨೭ ಕಾರ್ಯಕರ್ತರ ವಿರುದ್ಧ ಜಮಖಂಡಿ ತಾಲೂಕಿನ ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರ ಈ ಕ್ರಮದ ವಿರುದ್ಧ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಕಿಡಿಕಾರಿದ್ದು, ಪ್ರಕರಣ ಹಿಂಪಡೆಯದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಡಿಸೆಂಬರ್ ೨೪ ರಿಂದ ೨೯ ರವರೆಗೆ ಜಮಖಂಡಿ ತಾಲೂಕಿನ ತೊದಲಬಾಗಿ ಗುಡ್ಡದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರಿಗೆ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರವನ್ನು ಏರ್ಪಡಿಸಿದ್ದರು. ಶಿಬಿರದ ವೇಳೆ ಸೇನಾ ತರಬೇತಿ ಮಾದರಿಯಲ್ಲಿ ಯುವಕರಿಗೆ ತರಬೇತಿ ನೀಡಲಾಗಿತ್ತು. ದಂಡ ಪ್ರಯೋಗ, ನಕಲಿ ಗನ್ ಮೂಲಕ ಏರ್ ಗನ್ ತರಬೇತಿ, ಮುಳ್ಳು ಕಂಟಿಯ ಗುಂಡಿಯಲ್ಲಿ ಹಾಯ್ದು ಹೋಗುವುದು, ಸಂದಿಗ್ಧ ಸ್ಥಳಗಳಲ್ಲಿ ಪಾರಾಗುವುದು, ಟಾರ್ಗೆಟ್ ಸೆಟ್ ಮಾಡಿ ಗುರಿ ಇಟ್ಟು ಬಂದೂಕಿನಿAದ ಹೊಡೆಯುವುದು. ಹೀಗೆ ವಿವಿಧ ಕೌಶಲ್ಯ ತರಬೇತಿ ನೀಡಲಾಗಿತ್ತು.
ಈ ಬಗ್ಗೆ ಕಾಜಿಬೀಳಗಿ ಗ್ರಾಮದ ನಿಂಗಪ್ಪ ಹೂಗಾರ ಎನ್ನುವವರು ದೂರು ನೀಡಿದ್ದು, ಶ್ರೀರಾಮಸೇನೆ ಕಾರ್ಯಕರ್ತರು ಹಾಗೂ ಆಯೋಜಕರು ಕಾಶಿಲಿಂಗೇಶ್ವರ ದೇವಸ್ಥಾನದಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ ಆಯೋಜಿಸಿ, ಡಿ. ೨೯ ರಂದು ತಮ್ಮ ಸಹೋದರ ಹೆಸರಿನಲ್ಲಿ ಇರುವ ಜಮೀನಿನಲ್ಲಿ ತಮ್ಮ ಅನುಮತಿ ಇಲ್ಲದೇ ಅಕ್ರಮವಾಗಿ ಪ್ರವೇಶಿಸಿ, ಅಲ್ಲಿ ಬಂದೂಕು ತರಬೇತಿ ನೀಡಿದ್ದಾರೆ. ಅಲ್ಲದೇ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆಂದು ಎಂದು ಶ್ರೀರಾಮಸೇನೆ ಕಾರ್ಯಕರ್ತರು ಹಾಗೂ ತರಬೇತಿ ಆಯೋಜಕರು ಸೇರಿ ಬಾಗಲಕೋಟೆ ಜಿಲ್ಲೆಯ ೨೧ ಹಾಗೂ ಗದಗ ಜಿಲ್ಲೆಯ ೬ ಜನರು ಸೇರಿದಂತೆ ಒಟ್ಟು ಸೇರಿ ೨೭ ಜನರ ವಿರುದ್ಧ ೨೦೧೬ರ ಆಯುಧ ನಿಯಮಾವಳಿಗಳನ್ನು ಅನುಸರಿಸಿದೇ ಏರ್ ಗನ್ ಗುರಿ ಅಭ್ಯಾಸ ನೀಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಶ್ರೀರಾಮಸೇನೆ ಕಾರ್ಯಕರ್ತರ ವಿರುದ್ಧ ಎಫ ಐ ಆರ್ ಆಗಿರುವುದಕ್ಕೆ ಸಂಘಟನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದು, ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರಿಗೆ ಒಂದು ವಾರದ ಶಾರೀರಿಕ ಶಿಕ್ಷಣ ವರ್ಗ, ವ್ಯಕ್ತಿತ್ವ ವಿಕಸನ ತರಬೇತಿಯನ್ನು ಸಂಘಟನೆ ತೆಗೆದುಕೊಂಡಿತ್ತು. ಯುವಕರಲ್ಲಿ ಶೌರ್ಯ, ಕ್ಷಾತ್ರತ್ವ, ಶಿಸ್ತು ಹಾಗೂ ದುಶ್ಚಟ ಮುಕ್ತ ಯುವಕರನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಅಭ್ಯಾಸ ವರ್ಗ ನಡೆಸಿದ್ದೇವೆ. ಇದು ಮೊದಲ ಸಲವೇನು ಅಲ್ಲ. ಪ್ರತಿ ವರ್ಷ ಸಾಕಷ್ಟು ಸಲ ಈ ತರಬೇತಿ ನಡೆಸುತ್ತೇವೆ. ಪ್ರತಿ ವರ್ಷವೂ ಯುವಕರಿಗೆ ಏರ್ ಗನ್ ಮೂಲಕ ಗುರಿ ಇಡುವುದನ್ನು ಕಲಿಸುತ್ತೇವೆ. ಏರ್ ಗನ್ ವೆಪನ್ ಅಲ್ಲ, ಕಾನೂನು ಬಾಹಿರವೂ ಅಲ್ಲ. ಆದರೂ ಪೊಲೀಸರು ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಾರೆ. ಇವರಿಗೆ ತಲೆ ಏನಾದರೂ ಇದೆಯಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.