ಬೀದರ್: ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಡೆದಿರುವ ನಿಧಿ ಸಮರ್ಪಣಾ ಅಭಿಯಾನ ವೇಳೆ ಜಿಲ್ಲೆಯಲ್ಲಿ ಭರಪೂರ ದೇಣಿಗೆ ಸಂಗ್ರಹವಾಗುತ್ತಿದೆ. ಮಂಗಳವಾರ ಒಂದೇ ದಿನ ಔರಾದ್ ಹಾಗೂ ಬೀದರ್ ನಲ್ಲಿ ಸುಮಾರು 75 ಲಕ್ಷ ರೂ. ದೇಣಿಗೆ ಬಂದಿದೆ.
ಜೆಎಸ್ ಇನ್ಫ್ರಾ ಸಂಸ್ಥೆ ಮುಖ್ಯಸ್ಥರಾದ ಪ್ರಥಮ ದರ್ಜೆ ಗುತ್ತಿಗೆದಾರ ಸೂರ್ಯಕಾಂತ ಅಲ್ಮಾಜೆ ಅವರು ವೈಯಕ್ತಿಕ ರು. 21 ಲಕ್ಷ ದೇಣಿಗೆಯನ್ನು ಮಂದಿರಕ್ಕೆ ಸಮರ್ಪಿಸಿದ್ದಾರೆ. ಇದು ಜಿಲ್ಲೆಯಲ್ಲಿ ಒಬ್ಬರಿಂದ ಬಂದಿರುವ ಅತ್ಯಧಿಕ ದಾಖಲೆ ಮೊತ್ತ. ಔರಾದ್ ನಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಆರೆಸ್ಸೆಸ್ ಮುಖಂಡರಾದ ನಾಗೇಶರೆಡ್ಡಿ, ಹಣಮಂತರಾವ ಪಾಟೀಲ್, ಎನ್. ಕೃಷ್ಣಾರೆಡ್ಡಿ ನೇತೃತ್ವದ ಅಭಿಯಾನ ವೇಳೆ ಸೂರ್ಯಕಾಂತ ಅಲ್ಮಾಜೆ ಹಾಗೂ ಜ್ಯೋತಿ ದಂಪತಿ ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹೆಸರಿಗೆ ಬರೆದ ಈ ಮೊತ್ತದ ಚೆಕ್ ಹಸ್ತಾಂತರಿಸಿದರು.
ಅಲ್ಮಾಜೆ ಮನೆಯಿಂದ ಸಚಿವ ಚವ್ಹಾಣ್ ನಿಧಿ ಸಂಗ್ರಹ ಅಭಿಯಾನ ಆರಂಭಿಸಿ ಪಟ್ಟಣದ ವಿವಿಧೆಡೆ ರಾತ್ರಿವರೆಗೆ ಸಂಚರಿಸಿ 65 ಲಕ್ಷಕ್ಕೂ ಅಧಿಕ ದೇಣಿಗೆ ಸಂಗ್ರಹಿಸಿದ್ದಾರೆ. ಅಭಿಯಾನ ವೇಳೆ ವಸಂತ ವಕೀಲ 2.50 ಲಕ್ಷ ರೂ., ಧೋಂಡಿಬಾ ನರೋಟೆ, ನಂದು, ಅಶೋಕ ಅಲ್ಮಾಜೆ, ಶರಣಪ್ಪ ಪಂಚಾಕ್ಷರಿ, ಮೆಹಬೂಬ್ ಇತರರು ತಲಾ 1.50 ಲಕ್ಷ ರೂ., ಡಾ.ಕಲ್ಲಪ್ಪ ಉಪ್ಪೆ, ಶೇಷರಾವ ಕೋಳಿ ಮತ್ತಿತರರು ತಲಾ 1 ಲಕ್ಷ ರೂ. ಚೆಕ್ ನೀಡಿದರು.
ಅಭಿಯಾನದ ತಾಲೂಕು ಮುಖ್ಯಸ್ಥ ಡಾ.ಶಾಲಿವಾನ್ ಉದಗೀರೆ, ಪ್ರಮುಖರಾದ ಪ್ರಕಾಶ ಟೊಣ್ಣೆ, ಬಂಡೆಪ್ಪ ಕಂಟೆ, ಪ್ರಕಾಶ ಅಲ್ಮಾಜೆ, ರಾಮಶೆಟ್ಟಿ ಪನ್ನಾಳೆ, ಶ್ರೀನಿವಾಸ ಖೂಬಾ ಇತರರಿದ್ದರು. ಔರಾದ್ ತಾಲೂಕಿನಲ್ಲಿ ಅಭಿಯಾನ ವೇಳೆ ಕನಿಷ್ಠ 1 ಕೋಟಿ ರೂ. ದೇಣಿಗೆ ಸಂಗ್ರಹವಾಗುವ ಸಾಧ್ಯತೆಗಳಿವೆ.