ಬಾಗಲಕೋಟೆ: ಶ್ರೀರಾಘವೇಂದ್ರ ಸ್ವಾಮಿಗಳ ೩೫೨ನೇ ಆರಾಧಾನಾ ಮಹೋತ್ಸವು ಆ.೩೧ ರಿಂದ ಸೆ.೨ ರವರೆಗೆ ಕಿಲ್ಲಾ ಓಣಿಯಲ್ಲಿರುವ ನಂಜನಗೂಡು ಶ್ರೀರಾಯರ ಮಠದಲ್ಲಿ ಅದ್ಧೂರಿಯಾಗಿ ಜರುಗಲಿದೆ.
ಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆಜ್ಞಾನುಸಾರ ಮೂರು ದಿನಗಳ ಕಾಲ ಭಕ್ತಿ, ಭಾವದ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ ಎಂದು ಶ್ರೀಮಠದ ವ್ಯವಸ್ಥಾಪಕ ನಾರಾಯಣ ತಾಸಗಾಂವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆ.೩೦ ರಂದು ಬೆಳಗ್ಗೆ ೯ ಗಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಸಂಜೆ ೬ಕ್ಕೆ ಧ್ವಜಾರೋಹಣ, ಗೋ ಪೂಜೆ, ಧಾನ್ಯಪೂಜೆ, ಲಕ್ಷ್ಮೀಪೂಜೆ, ಪ್ರಾರ್ಥನೋತ್ಸವ ನೆರವೇರಲಿವೆ. ನಂತರ ಆ.೩೧ರಿಂದ ಮೂರು ದಿನಗಳ ಕಾಲ ಬೆಳಗ್ಗೆ ೫ಕ್ಕೆ ಸುಪ್ರಭಾತ, ೫.೩೦ಕ್ಕೆ ನಿರ್ಮಾಲ್ಯ ವಿಸರ್ಜನೆ, ಬೆಳಗ್ಗೆ ೭ಕ್ಕೆ ಅಷ್ಟೋತ್ತರ ಪಾರಾಯಣ, ಬೆಳಗ್ಗೆ ೮ಕ್ಕೆ ಪಂಚಾಮೃತ ಅಭಿಷೇಕ, ಬೆಳಗ್ಗೆ ೧೦ಕ್ಕೆ ಅರ್ಚನೆ, ಪಾದಪೂಜೆ, ಕನಕಾಭಿಷೇಕ, ಮಧ್ಯಾಹ್ನ ೧೨ಕ್ಕೆ ನೈವೇದ್ಯ, ಅಲಂಕಾರ ಪೂಜೆ, ಹಸ್ತೋದಕ ಹಾಗೂ ಮಹಾಮಂಗಳಾರತಿ ಜರುಗಲಿದ್ದು, ಸಂಜೆ ೭ಕ್ಕೆ ಸ್ವಸ್ತಿ ವಾಚನವಿರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಆ.೩೧ರ ಪೂರ್ವಾರಾಧನೆ, ಸೆ.೧ರಂದು ಮಧ್ಯಾರಾಧನೆ, ಸೆ.೨ ರಂದು ತೃತೀಯಾ ಉತ್ತರಾರಾಧನೆ, ಸೆ.೩ ಚತುರ್ಥೀಯಂದು ಶ್ರೀಸುಜ್ಞಾನೇಂದ್ರ ತೀರ್ಥರ ಆರಾಧನೆ ಜರುಗಲಿದೆ. ಆ.೨೬ರಿಂದ ಪ್ರತಿದಿನ ಸಂಜೆ ೭ ರಿಂದ ೮ ಗಂಟೆಯವರೆಗೆ ಶ್ರೀರಾಘವೇಂದ್ರ ವಿಜಯ ಪ್ರವಚನ ಜರುಗುವುದು ಎಂದು ತಿಳಿಸಿದ್ದಾರೆ.
ಐದು ದಿನಗಳ ಪಂಚರಾತ್ರೋತ್ಸವದಂದು ದಾಸವಾಣಿ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗಿದ್ದು, ಭರತನಾಟ್ಯ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಜರುಗಲಿವೆ. ಸೆ.೨ ರಂದು ಬೆಳಗ್ಗೆ ರಾಯರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಲಿದೆ ಎಂದು ತಿಳಿಸಿದ್ದಾರೆ.