ಶ್ರೀರಂಗಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಾಬಾ ಸಾಹೇಬರ ಪುತ್ಥಳಿ ಮುಂಭಾಗ ಶನಿವಾರ ವಿವಿಧ ಪ್ರಗತಿಪರ ಸಂಘಟನೆಗಳೊಂದಿಗೆ ರೈತ ಸಂಘದ ಕಾರ್ಯಕರ್ತರು ತಮಟೆ ಚಳುವಳಿ ನಡೆಸಿದರು. ಕೆಂಪೂಗೌಡ, ಪ್ರಸನ್ನಗೌಡ, ಕೃಷ್ಣೇಗೌಡ, ಶಂಕರೇಗೌಡ, ಪಾಂಡು, ಬಾಲಕೃಷ್ಣ, ಜಯರಾಮೇಗೌಡ, ಕೆನ್ನಾಳು ನಾಗಣ್ಣ, ನದೀಮ್ ಪಾಷ ಇದ್ದರು. 
ಜಿಲ್ಲೆ

ಶ್ರೀರಂಗಪಟ್ಟಣದಲ್ಲಿ 12ನೇ ದಿನಕ್ಕೆ ಕಾಲಿಟ್ಟ ಹೋರಾಟ

ಶ್ರೀರಂಗಪಟ್ಟಣ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಮಿತಿ ಹಾಗೂ ಸುಪ್ರೀಂಕೋರ್ಟ್ ಏನೇ ತೀರ್ಪು ನೀಡಿದರೂ ರಾಜ್ಯ ಸರ್ಕಾರ ಇನ್ಮುಂದೆ ತಮಿಳುನಾಡಿಗೆ ನೀರು ಹರಿಸಬಾರದು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ ಒತ್ತಾಯಿಸಿದರು.

ಪಟ್ಟಣದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳೊಂದಿಗೆ ರೈತ ಸಂಘ ನಡೆಸುತ್ತಿರುವ ಹೋರಾಟ ಶನಿವಾರ 11ನೇ ದಿನ ಪೂರೈಸಿದ್ದು, ಇದರ ಭಾಗವಾಗಿ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೂ ತಮಟೆ ಚಳುವಳಿ ನಡೆಸಿದ ಬಳಿಕ ಮಾತನಾಡಿದರು.

ರಾಜ್ಯ ಸರ್ಕಾರ ಈಗಾಗಲೇ ತಮಿಳುನಾಡಿಗೆ ನಿರಂತರವಾಗಿ ಕಾವೇರಿ ನೀರು ಹರಿಸಿದ್ದು, ಜಲಾಶಯ ಬರಿದಾಗುತ್ತಿದೆ. ಸದ್ಯ ಅಣೆಕಟ್ಟೆಯಲ್ಲಿ ಲಭ್ಯವಿರುವ ನೀರಿನಲ್ಲಿ ಕೃಷಿ ಮಾಡುವುದು ಕಷ್ಟಕರವಾಗಿದೆ. ಜಾನುವಾರುಗಳು ಸೇರಿದಂತೆ 2 ಕೋಟಿ ಜನರಿಗೆ ಕುಡಿಯುವ ನೀರು ಪೂರೈಕೆಗೆ ಆದ್ಯತೆ ನೀಡಿ ರಾಜ್ಯ ಸರ್ಕಾರ ಇನ್ಮುಂದೆ ನೀರು ಹರಿಸಬಾರದು. ಹೀಗಾಗಿ ಸಮಿತಿ ಹೋರಾಟಗಳ ಮೂಲಕ ನಿರಂತರವಾಗಿ ಸರ್ಕಾರಕ್ಕೆ ಜಾಗೃತಿ ಮೂಡಿಸುತ್ತಿದ್ದು, ರೈತರು ಹಾಗೂ ಜನರ ಹಿತ ಕಡೆಗಣಿಸಿದರೆ ತೀವ್ರತೆ ಬಿಗಡಾಯಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಮುಖಂಡ ಪ್ರಸನ್ನಗೌಡ, ರೈತ ಸಂಘದ ತಾಲೂಕು ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ, ಕಾರ್ಯದರ್ಶಿ ಶಂಕರೇಗೌಡ, ಮುಖಂಡರಾದ ಪಾಂಡು, ಕಡತನಾಳು ಬಾಲಕೃಷ್ಣ, ದೊಡ್ಡಪಾಳ್ಯ ಜಯರಾಮೇಗೌಡ, ಕೆನ್ನಾಳು ನಾಗಣ್ಣ, ನದೀಮ್ ಪಾಷ, ದಸಂಸ ಮುಖಂಡರಾದ ಗಂಜಾಂ ರವಿಚಂದ್ರು, ಚಂದ್ರಶೇಖರ್, ಮಡಿವಾಳ ಮಾಚಿದೇವಾ ಸಂಘದ ಅಧ್ಯಕ್ಷ ಮರಳಗಾಲ ಮಂಜುನಾಥ್, ಕರುನಾಡು ಹೋರಾಟ ಸಮಿತಿ ಅಧ್ಯಕ್ಷೆ ಪ್ರಿಯಾ ರಮೇಶ್, ಮರವೇ ಅಧ್ಯಕ್ಷ ಶಂಕರ್ ಬಾಬು ಇತರರು ಇದ್ದರು.