ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಅವರಾತ್ರಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಬೇಡಗಂಪಣ ಅರ್ಚಕರು ಮಾದಪ್ಪನಿಗೆ ಎಣ್ಣೆಮಜ್ಜನ ಸೇವೆಯನ್ನು ನೆರವೇರಿಸಿದರು.
ದೇಗುಲವನ್ನು ವಿವಿಧ ಪುಷ್ಪ, ತಳಿರು ತೋರಣದಿಂದ ಸಿಂಗರಿಸಲಾಗಿತ್ತಲ್ಲದೆ, ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ದೇಗುಲದಲ್ಲಿ ಸಂಜೆ 6.30 ರಿಂದ ರಾತ್ರಿ 8.30ರವರೆಗೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಬೇಡಗಂಪಣ ಸರದಿ ಅರ್ಚಕರು ಮಾದಪ್ಪನಿಗೆ ಮಹಾರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ಇತರ ಅಭಿಷೇಕದ ಜತೆಗೆ ಸಹಸ್ರ ಬಿಲ್ವಾರ್ಚನೆ ನೆರವೇರಿಸಿದರು. ಬಳಿಕ ಎಣ್ಣೆಮಜ್ಜನ ಸೇವೆಯನ್ನು ನೆರವೇರಿಸಿ ಮಾದಪ್ಪನ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಯಿತು. ಧೂಪ, ದೀಪಧಾರತಿ ಹಾಗೂ ಮಹಾಮಂಗಳಾರತಿ ಬೆಳಗಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಈ ಮೂಲಕ ಮಾದಪ್ಪನಿಗೆ ಎಣ್ಣೆಮಜ್ಜನ ಸೇವೆಯು ಸಾಂಪ್ರದಾಯಿಕವಾಗಿ ನೆರವೇರಿತು. ಬಳಿಕ ಭಕ್ತರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.
ಉತ್ಸವ ಮೂರ್ತಿಯ ಮೆರವಣಿಗೆ: ಎಣ್ಣೆಮಜ್ಜನ ಸೇವೆಯನ್ನು ನೆರವೇರಿಸಿದ ಬಳಿಕ ವಿವಿಧ ಪುಷ್ಪಗಳಿಂದ ಸಿಂಗರಿಸಿದ್ದ ಬಸವ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಸತ್ತಿಗೆ, ಸೂರಿಪಾನಿ, ಜಾಗಟೆ ಹಾಗೂ ಮಂಗಳ ವಾದ್ಯಂದೊಂದಿಗೆ ಸಾಲೂರು ಶ್ರೀಗಳ ನೇತೃತ್ವದಲ್ಲಿ ಉತ್ಸವ ಮೂರ್ತಿಯನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ಈ ವೇಳೆ ಭಕ್ತರು ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಭಕ್ತಿಭಾವ ಮೆರೆದರು. ಬಳಿಕ ನೆರೆದಿದ್ದ ಭಕ್ತರು ಪ್ರಸಾದ ವಿತರಿಸಲಾಯಿತು.
ಎಣ್ಣೆಮಜ್ಜನ ಹಿನ್ನೆಲೆಯಲ್ಲಿ ದೇಗುಲದ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಸಂಜೆ 7ರಲ್ಲಿ ಜರುಗಿದ ಚಿನ್ನದ ತೇರಿನ ಉತ್ಸವದಲ್ಲಿ ಭಾಗಿಯಾಗಿದ್ದರು. ಇದರಲ್ಲಿ ಹರಕೆ ಹೊತ್ತ ಭಕ್ತರು ದೇಗುಲದ ಸುತ್ತಾ ದಂಡಿನ ಕೋಲನ್ನು ಹೊತ್ತು ಪ್ರದಕ್ಷಿಣೆ ಹಾಕುವುದರ ಮೂಲಕ ಸ್ವಾಮಿ ಕೃಪೆಗೆ ಪಾತ್ರರಾದರು. ಈ ವೇಳೆ ಭಕ್ತರು ಜಯಘೋಷಗಳನ್ನು ಮೊಳಗಿಸಿದರು.
ಉತ್ಸವಗಳಲ್ಲಿ ಭಾಗಿಯಾದ ಭಕ್ತರು: ಎಂದಿನಂತೆ ಮ.ಬೆಟ್ಟಕ್ಕೆ ಆಗಮಿಸಿದ್ದ ಹರಕೆಹೊತ್ತ ಭಕ್ತರು ಮುಡಿಸೇವೆ, ಉರುಳುಸೇವೆ, ಪಂಜಿನಸೇವೆ ಹಾಗೂ ರಜಾ ಹೊಡೆಯುವ ಸೇವೆಯನ್ನು ಕೈಗೊಂಡು ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಕೆಲ ಭಕ್ತರು ದೇಗುಲದ ಸುತ್ತ ಹುಲಿ, ಬಸವ ಹಾಗೂ ರುದ್ರಾಕ್ಷಿ ವಾಹನ ಉತ್ಸವಾಧಿ ಸೇವೆಗಳಲ್ಲಿ ಭಾಗಿಯಾಗಿದ್ದರು. ಈ ವೇಳೆ ಭಕ್ತರು ಜಯಘೋಷವನ್ನು ಮೊಳಗಿಸಿದರು. ಬುಧವಾರ ಅವರಾತ್ರಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮ.ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಈ ಹಿನ್ನಲೆ ಶ್ರೀಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ದಾಸೋಹ ವ್ಯವಸ್ಥೆ, ಶುದ್ಧ ಕುಡಿಯುವ ನೀರು ಸೇರಿದತೆ ಇನ್ನಿತರ ಅಗತ್ಯ ಮೂಲ ಸೌಕರ್ಯವನ್ನು ಒದಗಿಸಿದ್ದು, ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು ಅಗತ್ಯ ಮುತುವರ್ಜಿ ವಹಿಸಿದ್ದಾರೆ.