ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ವಿ.ರಾಮಚಂದ್ರ  
ಜಿಲ್ಲೆ

ಶ್ರೀಬಸವ ಮಾಚಿದೇವ ಸ್ವಾಮೀಜಿ ಪಾದಪೂಜೆ ಆ. 10ಕ್ಕೆ

ಚಿಕ್ಕಮಗಳೂರು: ಜಿಲ್ಲಾ ಮಡಿವಾಳರ ಸಂಘದಿಂದ ಜಗದ್ಗುರು ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದ ಶ್ರೀ ಡಾ. ಬಸವ ಮಾಚಿದೇವ ಸ್ವಾಮೀಜಿ ಅವರ ಸಾಮೂಹಿಕ ಪಾದಪೂಜೆ ಕಾರ್ಯಕ್ರಮವನ್ನು ನಗರದ ಬಸವನಹಳ್ಳಿಯಲ್ಲಿರುವ ಜಿಲ್ಲಾ ಮಡಿವಾಳರ ಸಂಘದ ಆವರಣದಲ್ಲಿ ಆ. 10ರಂದು ಬೆಳಗ್ಗೆ 10.30ಕ್ಕೆ ಆಯೋಜಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ವಿ.ರಾಮಚಂದ್ರ ತಿಳಿಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಗಳು ಶ್ರಾವಣ ಮಾಸದ ಅಂಗವಾಗಿ ಮನ ಮನೆಗೆ ಮಾಚಿದೇವ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದರ ಅಂಗವಾಗಿ ಆ. 10ರಂದು ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದು, ಅಂದು ಅವರಿಗೆ ಸಮಾಜ ಬಾಂಧವರಿಂದ ಸಾಮೂಹಿಕ ಪಾದಪೂಜೆ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಶ್ರೀಗಳಿಗೆ ತಮ್ಮ ಮನೆಯಲ್ಲಿಯೇ ವೈಯಕ್ತಿಕವಾಗಿ ಪಾದಪೂಜೆ ಮಾಡಲಿಚ್ಛಿಸುವ ಭಕ್ತರು ಅಂದು ಮಧ್ಯಾಹ್ನ ಎರಡು ಗಂಟೆಯ ನಂತರ ಪಾದಪೂಜೆ ಮಾಡಿಸಬಹುದು. ಅಂಥವರು ಕನಿಷ್ಟ ಮೂರು ದಿನ ಮೊದಲು ಸಂಘಕ್ಕೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ಶ್ರೀಗಳಿಗೆ ಸಾಮೂಹಿಕ ಪಾದಪೂಜೆ ಕಾರ್ಯಕ್ರಮದ ಸಂದರ್ಭದಲ್ಲಿಯೇ ಜಿಲ್ಲೆಯ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿದರು.

ಸುದ್ದಿಗೋಷ್ಠಿಯಲ್ಲಿ ಕಡೂರು ತಾಲೂಕು ಸಂಘದ ಅಧ್ಯಕ್ಷ ಷಡಾಕ್ಷರಿ, ಜಿಲ್ಲಾ ಸಂಘದ ಖಜಾಂಚಿ ಸತೀಶ್, ಪ್ರಮುಖರಾದ ಮಂಜುನಾಥ್ ಮತ್ತಿತರರಿದ್ದರು.