ಜಿಲ್ಲೆ

ಶ್ರೀಪ್ರಸನ್ನವೆಂಕಟದಾಸರ ಸ್ಮಾರಕ ಭವನ ಲೋಕಾರ್ಪಣೆ

ಬಾಗಲಕೋಟೆ: ಪ್ರಸನ್ನ ವೆಂಕಟ ಸಾಂಸ್ಕೃತಿಕ ಮತ್ತು ಚಾರಿಟಬಲ್ ಟ್ರಸ್ಟ್ ಹಾಗೂ ಸಂಶೋಧನಾ ಟ್ರಸ್ಟ್ಗಳಿಂದ ನವನಗರ ಸೆಕ್ಟರ್ ನಂ.೦೩ರಲ್ಲಿ ನಿರ್ಮಿಸಿರುವ ಶ್ರೀಪ್ರಸನ್ನವೆಂಕಟ ದಾಸರ ಸ್ಮಾರಕ ಭವನವನ್ನು ಮಂತ್ರಾಲಯದ ಶ್ರೀಗುರು ಸಾರ್ವಭೌಮ ಹರಿದಾಸ ಸಾಹಿತ್ಯ ಯೋಜನೆಯ ಗೌರವ ನಿರ್ದೇಶಕ ಕೆ.ಅಪ್ಪಣಾಚಾರ್ಯ ಉದ್ಘಾಟಿಸಿದರು.

ಗುರುವಾರ ಸಂಜೆ ಭವನ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯಕ್ಕೆ ಪ್ರಸನ್ನ ವೆಂಕಟದಾಸರ ಕೊಡುಗೆ ಅಪಾರವಾಗಿದೆ. ಸರಳ ಭಾಷೆಯಲ್ಲಿ ದಾಸರ ಚಿಂತನೆಗಳನ್ನು ತಲುಪಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಡಾ.ಸುಭಾಸ ಕಾಖಂಡಕಿ ಹಾಗೂ ಡಾ.ರೇಖಾ ಕಾಖಂಡಕಿ ಅವರು ಮುಂದಾಳತ್ವ ವಹಿಸಿಕೊಂಡು ಪ್ರಸನ್ನ ವೆಂಕಟದಾಸರ ಸಂಶೋಧನೆಗೆ ಒತ್ತು ನೀಡುತ್ತಿರುವುದು ಹೆಮ್ಮೆಯ ಸಂಗತಿ ಆಗಿದೆ. ದಾಸರ ಕೀತಿ ನಾಡಿಗೆಲ್ಲ ಪಸರಿಸುವ ಕೆಲಸವಾಗುತ್ತಿರುವುದು ಖುಷಿ ತಂದಿದೆ ಎಂದರು.

ಪಂ.ರಘೋತ್ತಮಾಚಾರ್ಯ ನಾಗಸಂಪಿಗೆ ಅವರು ಮಾತನಾಡಿ, ದಾಸರ ಕುರಿತಾದ ಸಂಶೋಧನೆಗೆ ಒತ್ತು ದೊರೆಯುತ್ತಿರುವುದು ಹೆಮ್ಮೆಪಡುವ ವಿಚಾರವಾಗಿದೆ. ಬಾಗಲಕೋಟೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯವನ್ನು ಶ್ರೀಮಂತಗೊಳಿಸುವ ಕಾರ್ಯವನ್ನು ಈ ಟ್ರಸ್ಟ್ ಮಾಡುತ್ತಿದೆ ಎಂದು ಬಣ್ಣಿಸಿದರು. ಬವಿವ ಸಂಘದ ತಾಂತ್ರಿಕ ಸಂಸ್ಥೆಗಳ ನಿರ್ದೇಶಕ ಆರ್.ಎನ್.ಹೆರಕಲ್ ಅವರು ಮಾತನಾಡಿ, ಮಂಡ್ಯದಲ್ಲಿ ಇತ್ತೀಚೆಗೆ ಬೃಂದಾವನವೊAದು ಪತ್ತೆಯಾಗಿದ್ದು, ಅದು ಯಾರದು ಎಂಬುದರ ಬಗ್ಗೆ ಸಂಶೋಧನೆಗಳು ಅತ್ಯಗತ್ಯವಾಗಿದೆ. ಮಾಧ್ವ ಪರಂಪರೆಯಲ್ಲಿ ಇತಿಹಾಸವನ್ನು ಸ್ಪಷ್ಟವಾಗಿ ದಾಖಲಿಸುವ ಕಾರ್ಯ ವ್ಯಾಪಕವಾಗಿ ನಡೆಯಬೇಕಿದೆ ಎಂದರು.

ಪತ್ರಕರ್ತರಾದ ಸುಶಿಲೇಂದ್ರ ಕುಂದರಗಿ, ದ.ರಾ.ಪುರೋಹಿತ ಅವರು ಮಾತನಾಡಿ, ಪ್ರಸನ್ನ ವೆಂಕಟದಾಸರ ಭಾಷೆ ಬಗ್ಗೆ ಸಂಶೋಧನೆ ನಡೆಯಬೇಕಿದ್ದು, ಗಲ್ಲಿ, ಗಲ್ಲಿಗಳಲ್ಲಿ ಅವರ ಸಂಕೀರ್ತನೆಗಳು ಹಾಡುವಂತೆ ಆಗಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ವಿದುಷಿ ಪರಿಮಳಾ ವ್ಯಾಸರಾವ್ ಆದವಾನಿ ಅವರಿಗೆ ಶ್ರೀಪ್ರಸನ್ನ ವೆಂಕಟ ಸಂಗೀತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಡಾ.ಸುಭಾಸ್ ಕಾಖಂಡಕಿ, ಡಾ. ಬಿಂದುಮಾಧವಾಚಾರ್ಯ ನಾಗಸಂಪಿಗೆ, ವಿಠ್ಠಲಾಚಾರ್ಯ ಕಾಖಂಡಕಿ, ರವೀಂದ್ರ ಕುಲಕರ್ಣಿ, ಗುರುರಾಜ ಕುಲಕರ್ಣಿ, ಪ್ರೊ. ಬಿ.ಎಸ್.ಹರವಿ, ಗಾಯಕ ಪಂ. ಅನಂತ ಕುಲಕರ್ಣಿ ಮತ್ತಿತರರು ವೇದಿಕೆಯಲ್ಲಿದ್ದರು.