ಹಾಸನ: ‘ನೀವು ಈ ಬಾರಿ ನನಗೆ ಮತ ಹಾಕದೇ ಇದ್ದರೆ ನಿಮ್ಮ ಕೆಲಸ ಮಾಡಿಕೊಡುವುದಿಲ್ಲ’ ಎಂಬುದಾಗಿ ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಮ್‌ಗೌಡ ನಗರದ ಶ್ರೀನಗರ ಬಡಾವಣೆಯ ಅಲ್ಪಸಂಖ್ಯಾತರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಸಂಬಂಧ ಬಿಜೆಪಿ ಮತ್ತು ಪ್ರತಿಪಕ್ಷಗಳ ಮುಖಂಡರ ನಡುವೆ ಪರ-ವಿರೋಧಿ ಹೇಳಿಕೆಗಳ ಜಟಾಪಟಿ ಆರಂಭವಾಗಿದೆ.
ಅಲ್ಪಸಂಖ್ಯಾತರೇ ಹೆಚ್ಚಿರುವ ಶ್ರೀನಗರ ಬಡಾವಣೆಗೆ ಇತ್ತೀಚೆಗೆ ಶಾಸಕ ಪ್ರೀತಂಗೌಡ ರಾತ್ರಿ ವೇಳೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಕತ್ತಲಲ್ಲೇ ಶಾಸಕರು ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ‘ಯಾರು ಕೆಲಸ ಮಾಡುತ್ತಾರೋ ಅವರಿಗೆ ಮತ ಹಾಕಬೇಕು. ಕೆಲಸವಾಗುವವರೆಗೂ ನಮ್ಮ ಜೊತೆಯಲ್ಲೇ ಇದ್ದು, ಬಾಯಲ್ಲಿ ಅಣ್ಣಾ ಅಂತ ಹೇಳಿ ಕೊನೆಗೆ ನಾವು ಬಿಜೆಪಿಗೆ ಮತ ಹಾಕಲ್ಲ ಅಂತ ಹೇಳಿದರೆ ಕೆಲಸ ಮಾಡಿರೋರಿಗೆ ಉರಿ ಹತ್ತುತ್ತೆ’ ಎಂಬುದಾಗಿ ಶಾಸಕರು ಮಾತನಾಡಿರುವ ಧ್ವನಿ ವಿಡಿಯೊದಲ್ಲಿದೆ.
‘ನೀವು ಬೆಳಗ್ಗೆಯಿಂದ ಕೂಲಿ ಮಾಡುತ್ತೀರಾ, ಸಂಜೆ ಕೂಲಿ ಕೊಡದೇ ಹೋದರೆ ಬಿಡ್ತೀರಾ? ಅದೇ ರೀತಿಯೇ ನಾನು ಇಲ್ಲಿ ಕೆಲಸ ಮಾಡಿರುತ್ತೇನೆ. ಅದಕ್ಕೆ ಮತ ಕೇಳುತ್ತೇನೆ. ನಾನು ಮನಃಪೂರ್ವಕವಾಗಿ ಹೇಳುತ್ತಿದ್ದೇನೆ, ಮುಸಲ್ಮಾನರನ್ನು ನಮ್ಮ ಸಹೋದರರ ರೀತಿ ಕಾಣುತ್ತಿದ್ದೇನೆ. ಮುಂದೆಯೂ ಇದೇ ಭಾವನೆ ಇರುತ್ತದೆ. ಆದರೆ, ಈಗಾಗಲೇ ಮೂರು ಸಾರಿ ಕೈಕೊಟ್ಟಿದ್ದೀರಾ. ಹಿಂದಿನ ವಿಧಾನಸಭಾ ಚುನಾವಣೆ ನಡೆದಾಗಲೂ ಮತ ಹಾಕಲಿಲ್ಲ. ಅದಾದ ಬಳಿಕ ನಗರಸಭೆ ಮತ್ತು ಸಂಸದರ ಚುನಾವಣೆಯಲ್ಲೂ ಮತ ಹಾಕಿಲ್ಲ. ಇದೀಗ ವಿಧಾನಸಭಾ ಚುನಾವಣೆ ಬರುತ್ತಿದೆ. ಆ ಸಂದರ್ಭದಲ್ಲಿ ನೀವೇನಾದರೂ ಕೈಕೊಟ್ಟರೆ ನಾನು ಕೈ, ಕಾಲು ಎಲ್ಲ ಕೊಡ್ತೀನಿ. ನನ್ನ ಮನೆಗೆ ಬಂದರೆ ಕಾಫಿ ಕುಡಿಸಿ ಕಳುಹಿಸುತ್ತೇನೆ. ಯಾವ ಕೆಲಸವನ್ನು ಮಾಡಿಕೊಡುವುದಿಲ್ಲ’ ಎಂದು ಶಾಸಕರು ಹೇಳಿರುವುದು ವಿಡಿಯೊದಲ್ಲಿದೆ.
ಆತ್ಮೀಯ ಮಾತಿಗೆ ಬೆದರಿಕೆ ಬಣ್ಣ: ಬಿಜೆಪಿ ಕಿಡಿ
ನಗರದ ಶ್ರೀನಗರ ಬಡಾವಣೆಯಲ್ಲಿ ಶಾಸಕ ಪ್ರೀತಮ್‌ಗೌಡರು ಆತ್ಮೀಯತೆಯಿಂದ ಮಾತನಾಡಿರುವುದನ್ನೇ ಬೆದರಿಕೆ ಎಂಬುದಾಗಿ ಬಣ್ಣಕಟ್ಟಿ ಶಾಸಕರ ಏಳಿಗೆ ಸಹಿಸದ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ನಗರಸಭೆ ಅಧ್ಯಕ್ಷ ಆರ್. ಮೋಹನ್ ಮತ್ತು ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್ ಕಿಡಿಕಾರಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾವು ಮಾಡುವ ಅಭಿವೃದ್ಧಿ ಕೆಲಸಕ್ಕೆ ಕೂಲಿ ರೂಪದಲ್ಲಿ ಮತ ನೀಡಿ ಎಂಬುದಾಗಿ ಶಾಸಕರು ಆಡುಭಾಷೆಯಲ್ಲಿ ಕೇಳಿದ್ದಾರೆ. ಶಾಸಕ ಪ್ರೀತಮ್‌ಗೌಡರು ಜಾತ್ಯತೀತವಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ನಡೆಸುತ್ತಿದ್ದಾರೆ. ಅದೇ ರೀತಿ ಶ್ರೀನಗರ ನಿವಾಸಿಗಳೊಂದಿಗೂ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದಾರೆ. ಅವರ ಮಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಮಗೆ ಮತ ಬರದಿರುವ ಪ್ರದೇಶಗಳಲ್ಲೂ ಶಾಸಕ ಪ್ರೀತಮ್‌ಗೌಡರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕೆಲಸ ಮಾಡಿದವರು ಮತ ಕೇಳುವುದು ಸಹಜ. ಆದರೆ ಶಾಸಕರ ಜನಪ್ರಿಯತೆ ಸಹಿಸದ ವಿರೋಧಿಗಳು ತಪ್ಪು ಅರ್ಥ ಬರುವಂತೆ ವಿಡಿಯೊ ವೈರಲ್ ಮಾಡಿದ್ದಾರೆ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಚ್.ಎಂ. ಸುರೇಶ್‌ಕುಮಾರ್, ಪರ್ವೆಜ್ ಪಾಷಾ, ಪ್ರಸನ್ನ ಕುಮಾರ್, ಶೋಬಾನ್ ಬಾಬು ಇತರರು ಹಾಜರಿದ್ದರು.
ಕ್ಷಮೆ ಕೇಳಲು ಸ್ವರೂಪ್ ಆಗ್ರಹ:
ನಗರದ ಶ್ರೀನಗರ ಬಡಾವಣೆ ನಿವಾಸಿಗಳೊಂದಿಗೆ ರೌಡಿಯಂತೆ ವರ್ತಿಸಿರುವ ಶಾಸಕ ಪ್ರೀತಮ್‌ಗೌಡ ತಕ್ಷಣ ನಿವಾಸಿಗಳ ಕ್ಷಮೆ ಕೋರಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಪಿ. ಸ್ವರೂಪ್ ಆಗ್ರಹಿಸಿದರು.
ಒಬ್ಬ ಜನಪ್ರತಿನಿಧಿಯಾಗಿ ಮತದಾರರೊಂದಿಗೆ ಗೂಂಡಾ ರೀತಿ ನಡೆದುಕೊಂಡಿರುವುದು ಖಂಡನೀಯ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಿರುವುದಾಗಿ ಹೇಳಿಕೊಂಡಿರುವ ಶಾಸಕರು ಕಳಪೆ ಕಾಮಗಾರಿ ನಡೆಸುವ ಮೂಲಕ ಮತದಾರರನ್ನು ವಂಚಿಸಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಅಹಂಕಾರದಿಂದ ಮೆರೆಯುತ್ತಿರುವ ಶಾಸಕರಿಗೆ ಮುಂದಿನ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಶ್ರೀನಗರ ಬಡಾವಣೆ ನಿವಾಸಿಗಳು ಭಯಪಡುವ ಅಗತ್ಯ ಇಲ್ಲ, ಅವರೊಂದಿಗೆ ಜೆಡಿಎಸ್ ಇದೆ. ಶೀಘ್ರದಲ್ಲೇ ಬಡಾವಣೆತೆ ಭೇಟಿ ನೀಡಿ ಅಲ್ಲಿನ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಯ್ಯದ್ ಅನ್ಸಾರ್, ರಫೀಕ್ ಅಹಮದ್, ಇರ್ಷಾದ್ ಪಾಷಾ, ಸಯ್ಯದ್ ಜುಬೇರ್, ಮಹೇಶ್ ಇತರರು ಇದ್ದರು.
ಸಂವಿಧಾನ ವಿರೋಧ ಕೃತ್ಯ:
ತಮಗೆ ಮತ ಹಾಕುವಂತೆ ಪರೋಕ್ಷವಾಗಿ ಕ್ಷೇತ್ರದ ಜನರಿಗೆ ಶಾಸಕ ಪ್ರೀತಮ್ ಗೌಡ ಬೆದರಿಕೆ ಹಾಕಿರುವುದು ಸಂವಿಧಾನ ವಿರೋಧಿ ಕೃತ್ಯವಾಗಿದೆ ಎಂದು ಜೆಡಿಎಸ್ ಮುಖಂಡ ಪ್ರಸಾದ್‌ಗೌಡ ಆರೋಪಿಸಿದರು.
ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಲು ಪ್ರೀತಮ್‌ಗೌಡರೇನು ತಮ್ಮ ಮನೆಯಿಂದ ದುಡ್ಡು ತಂದು ಕಾಮಗಾರಿ ನಡೆಸುವುದಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೋಲು ಭೀತಿಯಿಂದ ಶಾಸಕರು ಈ ರೀತಿ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
ಶಾಸಕ ಪ್ರೀತಮ್‌ಗೌಡರ ನಡೆ ಸಂವಿಧಾನ ವಿರೋಧಿ ಆಗಿದ್ದು, ಚುನಾವಣಾ ಆಯೋಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್, ಆಪ್ ಖಂಡನೆ:
ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ ಮತ್ತು ಆಪ್ ಜಿಲ್ಲಾಧ್ಯಕ್ಷ ಶಿವಕುಮಾರ್ ಸೋಮವಾರ ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಶಾಸಕ ಪ್ರೀತಮ್‌ಗೌಡರ ವರ್ತನೆಯನ್ನು ಖಂಡಿಸಿದರು.
ಶಾಸಕರ ನಡೆ ಪ್ರಜಾಪ್ರಭುತ್ವ ವಿರೋಧಿ ಆಗಿದೆ. ಗೂಂಡಾ ರಾಜಕಾರಣ ಮಟ್ಟ ಹಾಕಲು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.