ಬೀದರ್: ತಾಲ್ಲೂಕಿನ ಕಮಠಾಣ ಸರ್ಕಾರಿ ಪ್ರೌಢಶಾಲೆಯ ಕನ್ನಡ ಸಹ ಶಿಕ್ಷಕಿ ಶ್ರೀದೇವಿ ವಿಜಯಕುಮಾರ ಪಾಟೀಲ ಪ್ರೌಢಶಾಲಾ ಸಹ ಶಿಕ್ಷಕರ ಆಶು ಭಾಷಣ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಅಗಸ್ತ್ಯ ಫೌಂಡೇಷನ್ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಅರ್ಹತೆ ಪಡೆದರು.
ಶ್ರೀದೇವಿ ಪಾಟೀಲ, ಮಕ್ಕಳಿಗೆ ಪರಿಣಾಮಕಾರಿ ಪಾಠ ಬೋಧನೆ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮ ಪ್ರತಿಭೆ ಪ್ರದರ್ಶಿಸುತ್ತ ಬಂದಿದ್ದಾರೆ. ಕಮಠಾಣ ಶಾಲೆಯ ಅನೇಕ ವಿದ್ಯಾರ್ಥಿಗಳು ಪ್ರತಿ ವರ್ಷ ಎಸ್ಸೆಸ್ಸೆಲ್ಸಿಯ ಕನ್ನಡ ವಿಷಯದಲ್ಲಿ ಗರಿಷ್ಠ ಅಂಕ ಪಡೆಯುತ್ತಿರುವುದು ಅವರ ಬೋಧನಾ ಕೌಶಲಕ್ಕೆ ಹಿಡಿದ ಕೈಗನ್ನಡಿಯಾಗಿದೆ.
‘ಬದುಕಿನ ಸಾರ್ಥಕತೆ’ ಕೃತಿ ರಚಿಸಿ ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದಾರೆ. ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಸೇರಿ ಅವರಿಗೆ ಅನೇಕ ಪ್ರಶಸ್ತಿ, ಸಮ್ಮಾನಗಳು ಸಂದಿವೆ.
ಬಹುಮಾನ ವಿತರಣೆ: ಆಶು ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಶ್ರೀದೇವಿ ಅವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದ್ದರು.