ಚಾಮರಾಜನಗರ: ನಗರದ ರೈಲ್ವೆ ಬಡಾವಣೆಯಲ್ಲಿರುವ ಕ್ಷತ್ರಿಯ ಮರಾಠ ಗೊಂದಲಿ ಸಮಾಜದಿಂದ 47ನೇ ವರ್ಷದ ಶ್ರೀಚಾಮುಂಡೇಶ್ವರಿ ಅಮ್ಮನವರ ಜಯಂತ್ಯುತ್ಸವ ವೈಭವದಿಂದ ಆಚರಣೆ ಮಾಡಲಾಯಿತು.
ಶ್ರೀಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಬೆಳ್ಳಿ ರಥದಲ್ಲಿ ಇರಿಸಿ ವಾಲ್ಮೀಕಿ ಭವನದಿಂದ ಆದಿಶಕ್ತಿ ದೇವಸ್ಥಾನದ ರಸ್ತೆ, ಚಿಕ್ಕ ಅಂಗಡಿ ಬೀದಿ, ದೊಡ್ಡ ಅಂಗಡಿ ಬೀದಿ ಮೂಲಕ ಕೊಳದ ಬೀದಿವರೆಗೆ ವಿಸರ್ಜನಾ ಮೆರವಣಿಗೆ ನಡೆಯಿತು. ಬಳಿಕ ಸಮೀಪದ ಸುವರ್ಣಾವತಿ ನದಿಯಲ್ಲಿ ದೇವಿಯ ವಿಗ್ರಹವನ್ನು ವಿಸರ್ಜನೆ ಮಾಡಲಾಯಿತು.
ಎರಡು ದಿನಗಳ ಕಾಲ ದೇವಿಯನ್ನು ಪ್ರತಿಷ್ಠಾಪಿಸಿದ ಗೊಂದಲಿ ಸಮಾಜದ ಕುಲಬಾಂಧವರು, ಹೋಮ, ಹವನ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಕೈಗೊಂಡರು. ಇಂದು ನಡೆದ ವಿಸರ್ಜನಾ ಮೆರವಣಿಗೆಯಲ್ಲಿ ಬ್ಯಾಂಡ್‌ಸೆಟ್, ಮಂಗಳವಾದ್ಯ, ಗೊರವರ ಕುಣಿತ, ಸೇರಿದಂತೆ ಹಲವು ಕಲಾತಂಡಗಳು ಭಾಗವಹಿಸಿ ಗಮನ ಸೆಳೆದವು. ಮೆರವಣಿಗೆ ಉದ್ದಕ್ಕೂ ಯುವಕರು ಮತ್ತು ಯುವತಿಯರು, ಮಹಿಳೆಯರು ಕುಣಿದು ಸಂಭ್ರಮಿಸಿದರು. ಇದೇ ವೇಳೆ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಮೆರವಣಿಗೆಯಲ್ಲಿ ಕ್ಷತ್ರಿಯ ಮರಾಠ ಗೊಂದಲಿ ಸಮಾಜದ ಪಟೇಲರಾದ ಭವಾನಿ ಶಂರ್ ರಾವ್, ಸಂಘದ ಅಧ್ಯಕ್ಷ ಶಿವಕುಮಾರ್‌ರಾವ್, ಯಜಮಾನ ಶ್ರೀನಿವಾಸ್, ಸಮಾಜದ ಮುಖಂಡರಾದ ಗೋಪಾಲ್ ರಾವ್, ದೇವು, ವಿಶ್ವ, ಸುರೇಶ್ ಬೆಂಗಳೂರು, ಉದಯ್ ಮೈಸೂರು, ಚಂದ್ರು, ರವಿ, ರವಿ ಚೌಹಾಣ್, ವಿಠಲ್ ರಾವ್, ತ್ರಿವೇಣಿ, ಲಕ್ಷ್ಮಿ, ಕಲಾವತಿ, ಆಶಾ, ಸುನಿತಾ ಇತರರು ಇದ್ದರು.