ಚಾಮರಾಜನಗರ: ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದಲ್ಲಿ ಜು.10 ರಂದು ನಡೆಯಲಿರುವ ಆಷಾಢ ಮಾಸದ ಬ್ರಹ್ಮ ರಥೋತ್ಸವದ ಹಿನ್ನೆಲೆಯಲ್ಲಿ ರಥಕ್ಕೆ ಶುಕ್ರವಾರ ಚಲನಪೂಜೆ ನೆರವೇರಿಸಲಾಯಿತು.
ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ನಿಲ್ಲಿಸಿದ್ದ ರಥಕ್ಕೆ ದೇವಸ್ಥಾನದ ಪ್ರಧಾನ ಅರ್ಚಕ ದರ್ಶನ್ ಅವರ ನೇತೃತ್ವದಲ್ಲಿ ರಥ ಚಲನ ಪೂಜೆಯನ್ನು ಸಲ್ಲಿಸಲಾಯಿತು.
ಈ ವೇಳೆ ಶ್ರೀಮಾರಾಜೇಶ್ವರಸ್ವಾಮಿಯ ವಿಗ್ರಹವನ್ನು ವಿವಿಧ ಹೂವುಗಳಿಂದ ಸಿಂಗಾರ ಮಾಡಲಾಗಿತ್ತು. ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ರಥಕ್ಕೆ ಪುಷ್ಪಾರ್ಚನೆ ಮಾಡಿ, ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು.
ಈ ವೇಳೆ ಅವರು ಮಾತನಾಡಿ, ರಥ ಚಲನ ಪೂಜೆಯೂ ರಥೋತ್ಸವದ ಅತ್ಯಂತ ಮಹತ್ವದ ಭಾಗವಾಗಿದೆ. ಈ ಪೂಜೆಯಿಂದ ರಥವು ಸುಗಮವಾಗಿ ಚಲಿಸುತ್ತದೆ ಎಂಬ ಪ್ರತೀತಿ ಇದೆ. ಭಕ್ತರಿಗೂ ಕೂಡ ರಥೋತ್ಸವ ವೇಳೆಯಲ್ಲಿ ಯಾವುದೇ ಅಡ್ಡಿಯಾಗುವುದಿಲ್ಲ ಎಂಬ ನಂಬಿಕೆ ಇದಾಗಿದೆ. ಶ್ರೀಚಾಮರಾಜೇಶ್ವರಸ್ವಾಮಿ ಮೇಲಿನ ಗೌರವ ಮತ್ತು ಭಕ್ತಿಯಲ್ಲಿ ನಾವೆಲ್ಲರೂ ಭಾಗಿಯಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀಚಾಮುಂಡೇಶ್ವರಿ ದೇವಸ್ಥಾನದ ಅರ್ಚಕ ನಾಗರಾಜ ದೀಕ್ಷಿತ್, ಅನಿಲ್‌ಕುಮಾರ್ ದಿಕ್ಷೀತ್, ರಾಮಕೃಷ್ಣ ಭಾರಧ್ವಜ್, ಶ್ರೇಯಶ್, ಅಣ್ಣಾಜಿ, ಚಿಕ್ಕಣ್ಣ, ಉತ್ಸವ ಸಮಿತಿಯ ಸದಸ್ಯರಾದ ಜಯಕುಮಾರ್, ಸ್ವಾಮಿ, ಸುರೇಶ್, ದೇವರಾಜ್, ನಾಗೇಶ್, ಪ್ರವೀಣ್, ಪ್ರಜ್ವಲ್, ಗಣಪತಿ ಹಾಗೂ ಇತರರು ಹಾಜರಿದ್ದರು.