ಜಿಲ್ಲೆ

ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರಕ್ಕೆ ಆಕ್ರೋಶ

ಕೆ.ಆರ್.ಪೇಟೆ: ಧರ್ಮಸ್ಥಳ ಶ್ರೀಕ್ಷೇತ್ರದ ವಿರುದ್ಧ ಯೂಟ್ಯೂಬ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಅಪಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ತಾಲೂಕು ಶ್ರೀಧರ್ಮಸ್ಥಳ ಕ್ಷೇತ್ರಾಭಿಮಾನಿಗಳ ವೇದಿಕೆ ಹಾಗೂ ಭಕ್ತರು ಪ್ರತಿಭಟನೆ ನಡೆಸಿದರು.

ತಾಲೂಕು ಶ್ರೀಧರ್ಮಸ್ಥಳ ಕ್ಷೇತ್ರಾಭಿಮಾನಿಗಳ ವೇದಿಕೆಯ ಪದಾಧಿಕಾರಿಗಳು ಹಾಗೂ ಭಕ್ತರು ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ತಾಲೂಕು ಕಚೇರಿಯವರೆಗೆ ಬೃಹತ್ ಪ್ರತಿಭಟನೆ ನಡೆಸಿದರು. ಪ್ರವಾಸಿ ಮಂದಿರದಲ್ಲಿ ಶ್ರೀ ಮಂಜುನಾಥಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ ಪ್ರತಿಭಟನೆ ಮತ್ತು ಪಾದಯಾತ್ರೆ ಜನಾಂದೋಲನಕ್ಕೆ ಚಾಲನೆ ನೀಡಲಾಯಿತು.

ಶಾಸಕ ಎಚ್.ಟಿ.ಮಂಜು, ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಕಾಪನಹಳ್ಳಿ ಗವಿಮಠದ ಶ್ರೀಸ್ವತಂತ್ರ ಚೆನ್ನವೀರ ಸ್ವಾಮೀಜಿ, ಬೇಬಿ ಮಠದ ಶ್ರೀಶಿವಬಸವ ಸ್ವಾಮೀಜಿ ನೇತೃತ್ವದಲ್ಲಿ ಸಾವಿರಾರು ಭಕ್ತರು ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿದರು.

ಧರ್ಮಸ್ಥಳ ಶ್ರೀಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ವಿದೇಶಿ ದೇಣಿಗೆ ಪಡೆದು ಧರ್ಮಸ್ಥಳ ಶ್ರೀಕ್ಷೇತ್ರದ ವಿರುದ್ಧ ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಯೂಟ್ಯೂಬ್‌ಗಳಲ್ಲಿ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುವ ಮೂಲಕ ಪವಿತ್ರ ಧರ್ಮಸ್ಥಳ ಕ್ಷೇತ್ರಕ್ಕೆ ಕೆಟ್ಟ ಹೆಸರು ತರಲಾಗುತ್ತಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಧರ್ಮರಕ್ಷಕರಾದ ಶ್ರೀ ವೀರೆಂದ್ರ ಹೆಗ್ಗಡೆ ಅವರೊಂದಿಗೆ ನಾವಿದ್ದೇವೆ. ದೇಶದ ಕೋಟಿ ಕೋಟಿ ಭಕ್ತರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿರುವ ಕಿಡಿಗೇಡಿಗಳನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸುವ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.

ಶಾಸಕ ಎಚ್.ಟಿ.ಮಂಜು ಮಾತನಾಡಿ, ಹಿಂದುಗಳ ಪವಿತ್ರ ಕ್ಷೇತ್ರವಾಗಿರುವ ಶ್ರೀಧರ್ಮಸ್ಥಳ ಕ್ಷೇತ್ರಕ್ಕೆ ಕೆಟ್ಟ ಹೆಸರು ತರಲು ಕಾಣದ ಕೈಗಳು ಪಿತೂರಿ ನಡೆಸುತ್ತಿವೆ. ರಾಜ್ಯ ಸರ್ಕಾರವು ಕೂಡಲೇ ಅನಾಮಿಕ ಸೇರಿದಂತೆ, ಮಹೇಶ್ ತಿಮ್ಮರೋಡಿ, ಸಮೀರ್, ಮಟ್ಟಣ್ಣನವರ್ ಗ್ಯಾಂಗ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅವರ ಬ್ಯಾಂಕ್ ಖಾತೆಗೆ ವಿದೇಶಗಳಿಂದ ಲಕ್ಷಾಂತರ ರೂ. ಜಮೆ ಆಗಿರುವ ಬಗ್ಗೆ ಖಚಿತ ಮಾಹಿತಿ ಇದೆ. ಹಾಗಾಗಿ ಕೂಡಲೇ ಎಸ್‌ಐಟಿ ಅಧಿಕಾರಿಗಳಿಂದ ಗುಂಡಿ ಅಗೆಯುವ ಕೆಲಸ ಬಿಟ್ಟು, ಲಕ್ಷ ಲಕ್ಷ ಹಣದ ಮೂಲದ ಬಗ್ಗೆ ತನಿಖೆ ನಡೆಸಿ ಷಡ್ಯಂತ್ರಕ್ಕೆ ಕಾರಣರಾಗಿರುವ ಎಲ್ಲರನ್ನೂ ಕಂಡು ಹಿಡಿದು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ದೇವಾಲಯ ಹಾಗೂ ಡಿ.ವೀರೇಂದ್ರ ಹೆಗ್ಗಡೆ ಕುಟುಂಬಕ್ಕೆ ಕಳಂಕ ತರಲು ಷಡ್ಯಂತ್ರ ನಡೆಸುತ್ತಿರುವ ವಿರುದ್ಧ ಸೂಕ್ತ ತನಿಖೆ ನಡೆಸಬೇಕು. ಯಾರೋ ಅನಾಮಿಕ ಹೇಳಿದಾಕ್ಷಣ ಎಸ್‌ಐಟಿ ರಚನೆ ಮಾಡಿದ್ದರ ಉದ್ದೇಶವಾದರೂ ಏನು? ಹಿಂದುಗಳ ಸಹನೆಯನ್ನು ಕೆಣಕುವುದನ್ನು ತಕ್ಷಣ ನಿಲ್ಲಿಸಬೇಕು. 15ಕಡೆ ಗುಂಡಿಗಳನ್ನು ಅಗೆದರೂ ಯಾವುದೇ ಕುರುಹುಗಳು ಸಿಕ್ಕಿಲ್ಲ. ಎಷ್ಟೇ ಗುಂಡಿಗಳನ್ನು ಅಗೆದರೂ ಏನೂ ಸಿಗಲ್ಲ. ಏಕೆಂದರೆ ಧರ್ಮಸ್ಥಳದಲ್ಲಿ ಅಂತಹ ಯಾವುದೇ ಕೆಟ್ಟ ಕೆಲಸಗಳು ನಡೆದಿಲ್ಲ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಿಲ್ಲಿಸದೇ ಇದ್ದರೆ ಜನರೇ ದಂಗೆ ಏಳುವ ಕಾಲ ದೂರವಿಲ್ಲ ಎಂದು ಹೇಳಿದರು.

ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮ್ಮರೋಡಿ, ಸಮೀರ್, ಸಂತೋಷ್ ಶೆಟ್ಟಿ, ಜಯಂತ್, ಅಜಯ್ ಅಂಚನ್ ಸೇರಿದಂತೆ ಇತರರು ಧರ್ಮಸ್ಥಳ ಮಂಜುನಾಥೇಶ್ವರ ಹಾಗೂ ವೀರೇಂದ್ರ ಹೆಗ್ಗಡೆ ಕುಟುಂಬವನ್ನು ಕೀಳುಮಟ್ಟದ ಭಾಷೆ ಉಪಯೋಗಿಸಿ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿರುವುದರಿಂದ ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಅನಾಮಿಕನ ಮಾತು ಕೇಳಿ ಕಂಡಕಂಡಲ್ಲಿ ಅಗೆದು ಶ್ರೀಕ್ಷೇತ್ರವನ್ನು ಮಲಿನ ಮಾಡಲು ಪ್ರಯತ್ನಿಸಲಾಗುತ್ತಿದೆ. ಸುಳ್ಳು ಸುದ್ದಿ ಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳು ಹಾಗೂ ಯೂಟ್ಯೂಬರ್‌ಗಳ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ಪ್ರತಿಭಟನೆಯ ನಂತರ ತಹಸೀಲ್ದಾರ್ ಎಸ್.ಯು.ಅಶೋಕ್ ಅವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಆರ್‌ಟಿಒ ಮಲ್ಲಿಕಾರ್ಜುನ್, ಕೆ.ಶ್ರೀನಿವಾಸ್, ಅಕ್ಕಿಹೆಬ್ಬಾಳು ರಘು, ಜ್ಯೋತಿ ದೇವರಾಜು, ಮೊಟ್ಟೆ ಮಂಜು, ಕೆ.ಎಸ್.ರಾಜೇಶ್, ಕೆ.ಕಾಳೇಗೌಡ, ಕೆ.ಜಿ.ತಮ್ಮಣ್ಣ, ತೋಟಪ್ಪಶೆಟ್ಟಿ, ಸುಜೇಂದ್ರಕುಮಾರ್, ಎಸ್.ಎಲ್.ಮೋಹನ್, ಕೆ.ಎನ್.ಕುಮಾರಸ್ವಾಮಿ, ಗಂಜಿಗೆರೆ, ನಿರಂಜನ್, ಹಿಂದು ಮಹಾಸಭಾ ವೇದಿಕೆಯ ಮುಖಂಡ ಹರೀಶ್, ನಳಿನಿ, ಜೈಹಿಂದ್ ನಾಗಣ್ಣ, ಶಿವಪ್ಪ, ಬ್ಯಾಂಕ್ ಪರಮೇಶ್, ಆರ್.ಜಗದೀಶ್, ಚೋಕನಹಳ್ಳಿ ಪ್ರಕಾಶ್, ರೂಪೇಶಾಚಾರ್ ಸೇರಿದಂತೆ ಸಾವಿರಾರು ಮಂದಿ ಪ್ರತಿಭಟನಾಕಾರರು ಭಾಗವಹಿಸಿದ್ದರು.