ಮಹಾಶಿವರಾತ್ರಿ ಮಹೋತ್ಸವದ ಹಿನ್ನೆಲೆಯಲ್ಲಿ ಪಾದಯಾತ್ರೆ ಕೈಗೊಂಡು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತೆರಳಲು ಚನ್ನರಾಯಪಟ್ಟಣ ತಾಲೂಕು ಹಿರೀಸಾವೆ ಗ್ರಾಮದ ಬಳಿ ಸಾಗುತ್ತಿರುವ ಬೆಂಗಳೂರಿನ ಕಣ್ಣೂರು ಗ್ರಾಮದ ಭಕ್ತರು. 
ಜಿಲ್ಲೆ

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ

ಚನ್ನರಾಯಪಟ್ಟಣ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಫೆ.18ರಂದು ಜರುಗಲಿರುವ ಶ್ರೀಮಂಜುನಾಥಸ್ವಾಮಿಯ ರಥೋತ್ಸವದಲ್ಲಿ ಪಾಲ್ಗೊಳ್ಳಲು ಪಾದಯಾತ್ರೆ ಹೊರಟಿರುವ ಭಕ್ತರು ಭಾನುವಾರ ಪಟ್ಟಣ ಮಾರ್ಗದಲ್ಲಿ ತಂಡೋಪ ತಂಡವಾಗಿ ಸಾಗಿದರು.

ಕಳೆದ ಬುಧವಾರ ಬೆಳಗ್ಗೆ ಬೆಂಗಳೂರಿನ ಕಣ್ಣೂರು ಶಿಲೆಶಿವಾಲಯ ಹಾಗೂ ವಿವಿಧೆಡೆಯಿಂದ ಪಾದಯಾತ್ರೆ ಪ್ರಾರಂಭಿಸಿರುವ ಭಕ್ತರು ಭಾನುವಾರ ಮಧ್ಯಾಹ್ನದ ವೇಳೆಗಾಗಲೇ ತಾಲೂಕು ಕೇಂದ್ರ ಚನ್ನರಾಯಪಟ್ಟಣದ ಬಳಿ ರಾಷ್ಟ್ರೀಯ ಹೆದ್ದಾರಿ 75ರ ಬದಿಯಲ್ಲಿ ಸಾಗಿದರು.

ಶ್ರೀ ಮಂಜುನಾಥಸ್ವಾಮಿ ಪಾದಯಾತ್ರಾ ಸಮಿತಿ, ಶ್ರೀ ಭೈರವೇಶ್ವರ ಪಾದಯಾತ್ರಾ ಸಮಿತಿ, ಶ್ರೀ ಶಿವಲಿಂಗ ಪಾದಯಾತ್ರಾ ಸೇವಾ ಸಮಿತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆ ಹಾಗೂ ಸಮಿತಿಗಳ ವತಿಯಿಂದ ಸುಮಾರು 3 ರಿಂದ 5 ಕಿಮೀಗೆ ಒಂದು ನಿಗದಿತ ಸ್ಥಳದಲ್ಲಿ ವಿಶ್ರಾಂತಿ ಹಾಗೂ ಊಟದ ವ್ಯವಸ್ಥೆಯ ಸಲುವಾಗಿ ಪೆಂಡಾಲ್ ನಿರ್ಮಿಸಲಾಗಿದೆ.

ಪಾದಯಾತ್ರೆ ಕೈಗೊಂಡು ನಡೆದುಕೊಂಡು ಆಗಮಿಸುವ ಪಾದಯಾತ್ರಿಗಳಿಗೆ ಪೆಂಡಾಲ್‌ನಲ್ಲಿ ಸಮಯಕ್ಕೆ ಸರಿಯಾಗಿ ಕಾಫಿ-ಟೀ, ಬಜ್ಜಿ, ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದ್ದು ಧಣಿವಾರಿಸಿಕೊಳ್ಳಲು ಮಜ್ಜಿಗೆ, ತಿಳಿ ಮೊಸರು ಹಾಗೂ ನೀರಿನ ಪ್ಯಾಕೆಟ್‌ಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿದೆ.

ಯಾವುದೇ ವಯೋಮಿತಿ ಇಲ್ಲದೆ ಪಾದಯಾತ್ರೆಯಲ್ಲಿ ಪಾಲ್ಗೊಂಡು ಶ್ರೀಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿಯ ದರ್ಶನ ಪಡೆಯಲು ಸಾವಿರಾರು ಭಕ್ತರು ನಡೆದುಕೊಂಡು ಸಾಗುತ್ತಿದ್ದು ಫೆ.17ರ ಸಂಜೆಗೆ ಶ್ರೀಕ್ಷೇತ್ರವನ್ನು ತಲುಪಲಿದ್ದೇವೆ ಎಂದು ಭಕ್ತರೊಬ್ಬರು ವಿಜಯವಾಣಿಗೆ ತಿಳಿಸಿದರು.

ಬೆಂಗಳೂರು ನಗರ ವಾಸಿಗಳು ಸೇರಿದಂತೆ ಕಣ್ಣೂರು, ಕೋಲಾರ, ಚಿಂತಾಮಣಿ, ಹುಸ್ಕೂರು, ಮುಳುಬಾಗಿಲು, ಬಿಡದಿ, ತುಮಕೂರು, ನಾಗಮಂಗಲ ವ್ಯಾಪ್ತಿಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸಾಗುತ್ತಿದ್ದರೆ, ಆನೇಕಲ್ ತಾಲೂಕು ಚಿಂತಲ ಮಡಿವಾಳ ಗ್ರಾಮದ ಲಕ್ಷ್ಮಣ ಅವರು ಕೇಸರಿ ಬಾವುಟ ಹಿಡಿದು ಓಂ ನಮಃ ಶಿವಾಯ ಎಂದು ಜಪಿಸುತ್ತ ಸಾಗುತ್ತಿರುವುದು ನೋಡುಗರ ಗಮನ ಸೆಳೆಯಿತು.

ಕಂಕಣಭಾಗ್ಯ ಮತ್ತು ಸಂತಾನಭಾಗ್ಯ, ಕಂಟಕ, ದೋಷ ಪರಿಹಾರ ಹಾಗೂ ರೋಗ-ರುಜುನೆಗಳ ನಿವಾರಣೆ ಸಲುವಾಗಿ ಹರಕೆ ಹೊತ್ತವರು ಇಷ್ಟಾರ್ಥ ಫಲಿಸಿದ ಹಿನ್ನೆಲೆಯಲ್ಲಿ ಪಾದಯಾತ್ರೆ ಮೂಲಕ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಹೋಗಿ ಮಾಡಿಕೊಂಡಿದ್ದ ಹರಕೆ ತೀರಿಸಿ ಶ್ರೀ ಮಂಜುನಾಥಸ್ವಾಮಿಯ ದರ್ಶನ ಪಡೆದು ಹಿಂದಿರುಗಲಿದ್ದಾರೆ.

ದಿಡಗ, ಕಬ್ಬಳಿ, ನುಗ್ಗೇಹಳ್ಳಿ, ಬಾಗೂರು, ಹಿರೀಸಾವೆ ಸೇರಿದಂತೆ ತಾಲೂಕು ವ್ಯಾಪ್ತಿಯಿಂದಲೂ ಶ್ರೀಕ್ಷೇತ್ರಕ್ಕೆ ಸಾವಿರಾರು ಜನರು ಭಕ್ತರು ಪಾದಯಾತ್ರೆ ಕೈಗೊಂಡಿದ್ದು ಭಾನುವಾರ ಮುಂಜಾನೆ ವ್ಯಾಪ್ತಿಯ ದೇಗುಲಗಳಲ್ಲಿ ಪೂಜೆ ಸಲ್ಲಿಸಿ ಪಯಣ ಹೊರಟರು.