ಜಿಲ್ಲೆ

ಶ್ರೀಕೊಲ್ಲಾಪುರದಮ್ಮ, ಶ್ರೀದೇವಮ್ಮ ದೇವಿ ರಥೋತ್ಸವ

ನುಗ್ಗೇಹಳ್ಳಿ: ಸಮೀಪದ ಬಿಸಲೆಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀಕೊಲ್ಲಾಪುರದಮ್ಮ ಹಾಗೂ ಶ್ರೀದೇವಮ್ಮ ದೇವಿಯ ರಥೋತ್ಸವ, ಸಿಡಿ ಉತ್ಸವ ಮತ್ತು ಸೋಮನ ಕುಣಿತದೊಂದಿಗೆ ವೈಭವದಿಂದ ತೆರೆ ಕಂಡಿತು.

ನೂರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಬೆಳಗಿನಿಂದಲೇ ಆರಂಭಗೊಂಡ ಅಮ್ಮನವರ ಜಾತ್ರಾ ಮಹೋತ್ಸವದ ಪ್ರಕ್ರಿಯೆಗಳಲ್ಲಿ ಹಲವು ವಿಧಿ ವಿಧಾನಗಳನ್ನು ಅನುಸರಿಸಲಾಯಿತು. ಜಲ ಅಭಿಷೇಕ, ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ಸಮರ್ಪಣೆ ಮಹಾ ಮಂಗಳಾರತಿಯನ್ನು ಅರ್ಚಕರು ನೆರವೇರಿಸಿದರು.

ಶ್ರೀಧೂತರಾಯ ಸ್ವಾಮಿ ಹಾಗೂ ಶ್ರೀವೀರಭದ್ರೇಶ್ವರಸ್ವಾಮಿಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಕಲ್ಯಾಣಿಯಲ್ಲಿ ಗಂಗಾಪೂಜೆ ಮಾಡಲಾಯಿತು. ನಂತರ ಹೂವಿನ ಅಲಂಕೃತ ರಥದಲ್ಲಿ ಶ್ರೀಕೊಲ್ಲಾಪುರದಮ್ಮ ಶ್ರೀದೇವಮ್ಮ ದೇವಿಯ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಮಹಾಮಂಗಳಾರತಿ ಬೆಳಗಲಾಯಿತು. ಭಕ್ತರು ಜಯ ಘೋಷದೊಂದಿಗೆ ರಥ ಎಳೆದು ಸಂಭ್ರಮಿಸಿದರು. ಸೋಮನ ಕುಣಿತ ಎಲ್ಲರ ಗಮನ ಸೆಳೆಯಿತು. ರಾತ್ರಿ ಸಿಡಿ ಉತ್ಸವ ಸಂಪನ್ನಗೊಂಡಿತು.

ಮುಖಂಡರಾದ ವಿಜಯಕುಮಾರಸ್ವಾಮಿ, ನಿಜಗುಣಮೂರ್ತಿ, ಬಿ.ಎಂ.ನಂದೀಶ್, ಆಟೋಮೊಬೈಲ್ ನವೀನ್‌ಕುಮಾರ್, ಹಳೇಮನೆ ದಿನೇಶ್‌ಕುಮಾರ್, ಮಹಾಲಿಂಗಪ್ಪ, ಯೋಗೇಶ್, ಮಹೇಶ್, ವೇದಮೂರ್ತಿ, ಲೋಕೇಶ್ ಶಾಸ್ತ್ರಿ, ಚಂದನ್, ಅರ್ಚಕ ಮಂಜುನಾಥ್, ಭಕ್ತರು ಹಾಜರಿದ್ದರು.