ಚಿತ್ರದುರ್ಗ: ವಿಶ್ವದ ಎಲ್ಲ ತತ್ವಗಳು ಶ್ರೀಕೃಷ್ಣನ ಭಗವದ್ಗೀತೆಯಲ್ಲಿವೆ ಎಂಬುದಾಗಿ ಪ್ರತಿಪಾದಿಸಿದ ಭೀಷ್ಮನ ಮಾತು ಸರ್ವಕಾಲಕ್ಕೂ ಪ್ರಸ್ತುತ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ.ಪರಮೇಶ್ವರಪ್ಪ ಹೇಳಿದರು.
ಹೊಳಲ್ಕೆರೆ ರಸ್ತೆಯ ಶ್ರೀಕೃಷ್ಣ ವೃತ್ತದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಯಾದವ ಸಮಾಜದಿಂದ ಸೋಮವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿಯಲ್ಲಿ ಮಾತನಾಡಿದರು.
ಭಗವದ್ಗೀತೆ ಬದಲಾವಣೆ, ರೂಪಾಂತರ ಆಗದೆ, ಯಥಾವತ್ತಾಗಿ ಉಳಿದಿದೆ. ಶ್ರೇಷ್ಠತೆ ಪಡೆದುಕೊಂಡಿದೆ. ಜನ್ಮಾಷ್ಟಮಿ ಆನಂದದ ಸಂಕೇತವಾಗಿದೆ. ಬಾಲ್ಯ, ಯೌವ್ವನ, ಸನ್ಯಾಸತ್ವ ಸೇರಿ ಒಟ್ಟು ಮೂರು ಹಂತದಲ್ಲಿ ಶ್ರೀಕೃಷ್ಣನ ಚರಿತ್ರೆ ಇದೆ. ಋಷಿ ಮುನಿಗಳ ಪ್ರಕಾರ ಒಬ್ಬ ಮನುಷ್ಯ ಮಹಾತ್ಮನಾಗಲು, ದೇವರಾಗಲು ಆರು ಗುಣಗಳಿರಬೇಕು. ಶ್ರೀಮಂತಿಕೆ, ಅಧಿಕಾರ, ಕೀರ್ತಿವಂತ, ಸೌಂದರ್ಯ, ದಾನಿ ಹಾಗೂ ತ್ಯಾಗಿಯಾಗಿರಬೇಕು. ಈ ಎಲ್ಲವೂ ಶ್ರೀಕೃಷ್ಣನಲ್ಲಿತ್ತು ಎಂದು ಹೇಳಿದರು.
ಪಂಪ ಕವಿ ಅರ್ಜುನನನ್ನು, ಕುಮಾರವ್ಯಾಸ ಕೃಷ್ಣನನ್ನು ತನ್ನ ಕಾವ್ಯದ ಕಥಾ ನಾಯಕನನ್ನಾಗಿ ಮಾಡಿಕೊಂಡಿದ್ದರು. ಮಹನೀಯರ ಆದರ್ಶ ಜನರಿಗೆ ತಲುಪಿಸುವ ಸದುದ್ದೇಶದಿಂದ ಸರ್ಕಾರ ಜಯಂತಿಗಳನ್ನು ಆಚರಿಸುತ್ತಿದ್ದು, ಪಾಲನೆಯೊಂದಿಗೆ ಸಮಾಜದ ಮಲೀನತೆ ತೊಲಗಿಸಲು ಮುಂದಾಗೋಣ ಎಂದು ಸಲಹೆ ನೀಡಿದರು.
ಚಿತ್ರದುರ್ಗದ ಗ್ರೇಡ್-2 ತಹಸೀಲ್ದಾರ್ ನಾಗರಾಜ್ ಮಾತನಾಡಿ, ವಿಶ್ವಕ್ಕೆ ದಾರಿತೋರಿಸುವ ನಿಟ್ಟಿನಲ್ಲಿ ಶ್ರೀಕೃಷ್ಣನ ಕೊಡುಗೆ ಅಪಾರ. ಭಗವದ್ಗೀತೆಯ ಸಂದೇಶಗಳು ಇಂದಿಗೂ ಪ್ರಸ್ತುತ. ಗೀತೋಪದೇಶ ನಾವೆಲ್ಲರೂ ಪಾಲಿಸುತ್ತ ಸಮಾಜಕ್ಕೆ ಮಾದರಿಯಾಗಿ ಜೀವಿಸೋಣ ಎಂದರು.
ಅಖಿಲ ಭಾರತ ಯಾದವ ಗುರುಪೀಠದ ಶ್ರೀಕೃಷ್ಣ ಯಾದವನಂದ ಸ್ವಾಮೀಜಿ ಶ್ರೀಕೃಷ್ಣನ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ಯಾದವ ಸಮಾಜದ ಮುಖಂಡರಾದ ಬಿ.ಆನಂದ, ಕದಿರಣ್ಣ, ಜಾಲಿಕಟ್ಟೆ ಜಗನಾಥ್, ಗರಡಿ ತಿಮ್ಮಣ್ಣ, ಕೃಷ್ಣಪ್ಪ, ಆಯಿತೋಳು ಮಾರುತೇಶ್, ಪರಶುರಾಂಪುರ ಚಿತ್ತಯ್ಯ, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಇತರರಿದ್ದರು.
ಪ್ರತಿಮೆಗಳಿಗೆ ಮಾಲಾರ್ಪಣೆ: ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಗರದ ಕನಕದಾಸರು, ಸಂಗೊಳ್ಳಿ ರಾಯಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಒನಕೆ ಓಬವ್ವ, ಮದಕರಿನಾಯಕರ ಪ್ರತಿಮೆಗೆ ಮಾಲಾರ್ಪಣೆಯೊಂದಿಗೆ ಗೌರವ ಸಮರ್ಪಿಸಲಾಯಿತು. ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಕೆ.ಎಂ.ಹಾಲಸ್ವಾಮಿ, ಸಿ.ಟಿ.ಕೃಷ್ಣಮೂರ್ತಿ, ಸಂಪತ್‌ಕುಮಾರ್ ಟಗರನಹಟ್ಟಿ, ಜಿ.ವಿ.ಮಧುಗೌಡ, ನಾಗರಾಜ್ ಇತರರಿದ್ದರು.