ಚಿತ್ರದುರ್ಗ: ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿಯನ್ನು ಜ.15 ರಂದು ಬೆಳಗ್ಗೆ 11.30 ಕ್ಕೆ ಡಿಸಿ ಕಚೇರಿಯಲ್ಲಿ ಆಚರಿಸಲಾಗುತ್ತಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಅವರು, ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಚಿತ್ರದುರ್ಗ ನಗರಸಭೆಯಿಂದ ಕಾರ‌್ಯಕ್ರಮ ಆಚರಿಸಲಾಗುವುದು. ಇದರ ಅಂಗವಾಗಿ ಗೀತಗಾಯನ ಹಾಗೂ ಉಪನ್ಯಾಸ ಏರ್ಪಡಿಸಲಾಗುವುದು ಎಂದರು.
ಜಿಲ್ಲಾ ಭೋವಿ ಸಮಾಜದ ನಿರ್ದೇಶಕ ಡಿ.ಸಿ.ಮೋಹನ್ ಮಾತನಾಡಿ, ಸಮಾಜದಿಂದ ಜ.28 ರಂದು ನಗರದಲ್ಲಿ ಅದ್ದೂರಿಯಾಗಿ ರಾಜ್ಯಮಟ್ಟದ ಶ್ರೀ ಸಿದ್ದರಾಮೇಶ್ವರ ಜಯಂತಿ ಆಚರಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸ ಲಿದ್ದಾರೆ. ಸರ್ಕಾರದಿಂದ ಆಚರಿಸುವ ಕಾರ‌್ಯಕ್ರಮಕ್ಕೆ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾ ಭೋವಿ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಕಾರ್ಯದರ್ಶಿ ಎಚ್.ಲಕ್ಷ್ಮಣ್, ಖಜಾಂಚಿ ಇ.ಮಂಜುನಾಥ, ಮುಖಂಡರಾದ ಜಿ.ತಿಪ್ಪೇಸ್ವಾಮಿ, ಭರತ್, ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹರೀಶ್, ಸಿಪಿಐ ಗುಡ್ಡಪ್ಪ, ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ಮತ್ತಿತರರು ಇದ್ದರು.