ಜಿಲ್ಲೆ

ಶ್ರೀ ಶಿವಕುಮಾರ ಸ್ವಾಮೀಜಿ ಶ್ರದ್ಧಾಂಜಲಿ 20ರಿಂದ

ಚಿತ್ರದುರ್ಗ: ತರಳಬಾಳು ಮಠದ ಹಿರಿಯ ಗುರುಗಳಾದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 32ನೇ ಶ್ರದ್ಧಾಂಜಲಿ ಸಮಾರಂಭ ಸೆ.20ರಿಂದ 24ರವರೆಗೆ ಸಿರಿಗೆರೆಯ ಮಠದ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಠದ ಕಾರ‌್ಯದರ್ಶಿ ಜಿ.ಆರ್.ಓಂಕಾರಪ್ಪ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತರಳಬಾಳು ಮಠದ ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ‌್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಕಾರ‌್ಯಕ್ರಮಗಳೊಂದಿಗೆ ಸಮಾರಂಭವನ್ನು ಅದ್ದೂರಿ, ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.
20ರ ಸಂಜೆ 6ಕ್ಕೆ ಆರಂಭವಾಗಲಿದ್ದು, 24ರ ಬೆಳಗ್ಗೆ 11 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಪ್ರತಿದಿನವೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್, ಸಾಧುಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಡಾ.ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ಈಶ್ವರಖಂಡ್ರೆ, ನಿವೃತ್ತ ಡಿಜಿ ಶಂಕರ ಎಂ.ಬಿದರಿ ಇತರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಐದು ಸಾವಿರ ಭಕ್ತರು ಕುಳಿತು ಕಾರ‌್ಯಕ್ರಮ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. 4 ಸಾವಿರಕ್ಕೂ ಅಧಿಕ ಜನರು ಏಕಕಾಲಕ್ಕೆ ಪ್ರಸಾದ ಸ್ವೀಕರಿಸಬಹುದಾಗಿದೆ. 20ರಿಂದ 25ರ ವರೆಗೆ ಉಪಹಾರ, ಪ್ರಸಾದ ವ್ಯವಸ್ಥೆ ಇರುತ್ತದೆ. ಸಮಾರಂಭದ ಅಂಗವಾಗಿ 22ರಂದು ತರಳಬಾಳು ಜಗದ್ಗುರು ಪಶು ಚಿಕಿತ್ಸಾಲಯದಲ್ಲಿ ಪಶು ಉಚಿತ ಚಿಕಿತ್ಸೆ ನಡೆಯಲಿದೆ ಎಂದರು.
23ರ ಬೆಳಗ್ಗೆ 10 ಗಂಟೆಗೆ ರಕ್ತದಾನ, ಕಣ್ಣಿನ ಉಚಿತ ತಪಾಸಣೆ, 11 ಗಂಟೆಗೆ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಹಿರಿಯ ವಿದ್ಯಾರ್ಥಿಗಳು, ನಿವೃತ್ತ ನೌಕರರ ಸಮಾವೇಶ ನಡೆಯಲಿದೆ. ಸಂಜೆ 4ಕ್ಕೆ ಸಿರಿಗೆರೆಯಲ್ಲಿ ಶಿವಕುಮಾರ ಶ್ರೀಗಳ ಭಾವಚಿತ್ರದ ಮೆರವಣಿಗೆ ಇರುತ್ತದೆ ಎಂದು ತಿಳಿಸಿದರು. ಶಿಮಠದ ಕಾನೂನು ಸಲಹೆಗಾರ ಸೋಮಶೇಖರಪ್ಪ, ಮರುಳಸಿದ್ದಪ್ಪ ಇದ್ದರು.