oplus_4194304 
ಜಿಲ್ಲೆ

ಶ್ರೀ ಶಂಭುಲಿಂಗ ಸ್ವಾಮೀಜಿ ನಾಲ್ಕನೇ ಆರಾಧನೋತ್ಸವ

ಆಲೂರು : ಭಗವಂತ ಮತ್ತು ಗುರುವಿನ ಕರುಣೆಯಿಲ್ಲದೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ನುಡಿದರು.

ತಾಲೂಕಿನ ಕಾರ್ಜುವಳ್ಳಿ ಗ್ರಾಮದಲ್ಲಿರುವ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಲಿಂಗೈಕ್ಯ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ನಾಲ್ಕನೇ ವರ್ಷದ ಆರಾಧನಾ ಮಹೋತ್ಸವದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಪ್ರೀತಿ, ವಿಶ್ವಾಸ, ದಯೆಯಿಂದ ಭಗವಂತನ ಅನುಗ್ರಹಕ್ಕೆ ಪಾತ್ರರಾದರೆ ಯಾವುದೂ ಕಷ್ಟಸಾಧ್ಯವಲ್ಲ. ಶ್ರೀ ಮಠದ ಪೀಠಾಧ್ಯಕ್ಷರಾಗಿದ್ದ ಲಿಂಗೈಕ್ಯ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಹಲವು ವರ್ಷ ಮಠದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದರು. ಸಜ್ಜನಿಕೆ ಮೂಲಕ ಅಪಾರ ಭಕ್ತ ಸಮೂಹವನ್ನು ಸಂಪಾದಿದ್ದರು ಎಂದು ಗುರುಗಳ ಸೇವಾಕಾರ್ಯವನ್ನು ಸ್ಮರಿಸಿದರು.

ಶ್ರೀ ಮಠದ ಆಡಳಿತಾಧಿಕಾರಿ ಎಸ್.ಎಸ್.ಶಿವಮೂರ್ತಿ, ಗ್ರಾಮದ ಹಿರಿಯ ಮುಖಂಡ ಯೋಗೀಶ್‌ಮಾತನಾಡಿದರು. ಇದಕ್ಕೂ ಮೊದಲು ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ಮಹಾಮಂಗಳಾರತಿ ನಡೆಯಿತು. ಬಳಿಕ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಧಾರ್ಮಿಕ ಸಭೆ ನಡೆಯಿತು. ಕಾರ್ಜುವಳ್ಳಿ ಗ್ರಾಮದ ಹಿರಿಯ ಮುಖಂಡರಾದ ಯೋಗೇಶ್, ಮಲ್ಲೇಶ್, ನಿಂಗರಾಜು, ಮಡಬಲು ಗ್ರಾಮ ಪಂಚಾಯತಿ ಸದಸ್ಯ ಪ್ರದೀಪ್, ಶ್ರೀಮಠದ ಭಕ್ತರಾದ ಯಶ್ವಂತ, ವಿನಯ್ ಶೈವ, ಬಾಲಲೋಚನ, ರವಿ, ವಸಂತ ಕುಮಾರ್, ಹರೀಶ ಹಾಲಪ್ಪ, ಪ್ರಕಾಶ್, ಮೀನಾಕ್ಷಿ, ದೇವಿಕಾ, ಜಯಮ್ಮ ಇತರರಿದ್ದರು.