ಚಾಮರಾಜನಗರ: ಭೀಮನ ಅಮಾವಾಸ್ಯೆ ಪ್ರಯುಕ್ತ ಶ್ರೀಶಂಕರೇಶ್ವರ ಬೆಟ್ಟದಲ್ಲಿ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಭಾನುವಾರ ವಿಶೇಷ ಪೂಜೆ ನೆರವೇರಿಸಲಾಯಿತು.
ತಾಲೂಕಿನ ಯಡಿಯೂರು, ಮಂಗಲ ಗ್ರಾಮದ ಸಮೀಪದಲ್ಲಿರುವ ಶ್ರೀಶಂಕರೇಶ್ವರಸ್ವಾಮಿ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ಬೆಳಗ್ಗೆ 5 ಗಂಟೆಗೆ ಶ್ರೀವಿನಾಯಕ ಹಾಗೂ ಶ್ರೀ ಶಂಕರೇಶ್ವರಸ್ವಾಮಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ನೆರವೇರಿಸಲಾಯಿತು.
ಬಳಿಕ ದೇವಸ್ಥಾನದ ಸುತ್ತಲೂ ಹುಲಿವಾಹನ ಉತ್ಸವ, ಪೂಜಾ ಮಹೋತ್ಸವ ನಡೆಯಿತು.
ಶ್ರೀಶಂಕರೇಶ್ವರಸ್ವಾಮಿ ಪೂಜಾಮಹೋತ್ಸವದ ಅಂಗವಾಗಿ ಮಂಗಲ, ಯಡಿಯೂರು, ಮಹಂತಾಳಪುರ, ಹುಲ್ಲೇಪುರ, ಕರಡಿಮೋಳೆ, ಹೊಸೂರು ಹಾಗೂ ಇನ್ನಿತರೆ ಗ್ರಾಮಗಳ ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿ, ದೇವರ ಕೃಪೆಗೆ ಪಾತ್ರವಾದರು. ಶ್ರೀಶಂಕರೇಶ್ವರಸ್ವಾಮಿ ಪೂಜಾ ಮಹೋತ್ಸವದ ಅಂಗವಾಗಿ ನೆರೆದ ಭಕ್ತಾಧಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಭೀಮನ ಅಮಾವಾಸ್ಯೆ ಪ್ರಯುಕ್ತ ಬದನಗುಪ್ಪೆ ಸಮೀಪದ ಜವನಗುಡ್ಡೆ ಮಹದೇಶ್ವರ ದೇಗುಲದಲ್ಲೂ ವಿಶೇಷ ಪೂಜೆ ನೆರವೇರಿತು.
ಈ ಬಾರಿ ಜನಸ್ತೋಮ:
ಭೀಮನ ಅಮಾವಾಸ್ಯೆ ಅಂಗವಾಗಿ ಶ್ರೀಶಂಕರೇಶ್ವರ ಬೆಟ್ಟದಲ್ಲಿ ಪ್ರತಿವರ್ಷವೂ ನಡೆಯುವ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆಯಲ್ಲಿ ಈ ಬಾರಿ ಜನಸ್ತೋಮ ಕಂಡುಬಂದಿತು. ದೇವಾಲಯ ಸುತ್ತಮುತ್ತ ಹಾಗೂ ಅನ್ನಸಂತರ್ಪಣೆಯಲ್ಲಿ ಕಳೆದ ವರ್ಷಕ್ಕಿಂತಲೂ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕುಟುಂಬ ಸಮೇತರಾಗಿ ಭಾಗವಹಿಸಿದ್ದರು. ಕೆಲಕಾಲ ಬರುತ್ತಿದ್ದ ತುಂತುರು ಮಳೆಯನ್ನು ಲೆಕ್ಕಿಸದೇ ಜನರು ದೇವರಿಗೆ ಪೂಜೆ ನೆರವೇರಿಸಿ, ಪ್ರಸಾದ ಸ್ವೀಕರಿಸಿದರು.