ಗುಂಡ್ಲುಪೇಟೆ: ತಾಲೂಕಿನ ಹುಲಿಗಿನ ಮುರಡಿ ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ಗೋಲಕವನ್ನು ಶುಕ್ರವಾರ ಮುಜರಾಯಿ ಅಧಿಕಾರಿಗಳ ನೇತೃತ್ವದಲ್ಲಿ ತೆರೆದು ಎಣಿಕೆ ಮಾಡಲಾಯಿತು.
ಚಿಕ್ಕತಿರುಪತಿ ಎಂದೇ ಕರೆಯಲಾಗುವ ಹುಲಿಗಿನ ಮುರಡಿ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ಪ್ರತಿ ವರ್ಷವೂ ಸಂಕ್ರಾಂತಿ ಹಬ್ಬದಂದು ರಥೋತ್ಸವ ಜರುಗುತ್ತಿದೆ. ಈ ಬಾರಿ ಜಾತ್ರೆ ಮುಗಿದ ಎರಡು ದಿನಗಳ ನಂತರ 2023ರ ಜ.16 ರಂದು ಗೋಲಕ ತೆರೆಯಲಾಗಿತ್ತು. ಆಗ 2,57,868 ರೂ. ಸಂಗ್ರಹವಾಗಿದ್ದು, ಐದೂವರೆ ತಿಂಗಳ ನಂತರ ಶುಕ್ರವಾರ ಗೋಲಕದ ಹಣ ಎಣಿಕೆ ಮಾಡಿದಾಗ 5,95,258 ರೂ.ಸಂಗ್ರಹವಾಗಿದ್ದು, ಐದು ತಿಂಗಳಲ್ಲಿ ದೇವಾಲಯಕ್ಕೆ ಹರಿದು ಬಂದಿರುವ ಕಾಣಿಕೆ ದುಪ್ಪಟ್ಟಾಗಿದೆ ಎಂದು ಕಂದಾಯಾಧಿಕಾರಿಗಳು ತಿಳಿದ್ದಾರೆ.
ಎಣಿಕೆ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ಜಯಪ್ರಕಾಶ್, ತೆರಕಣಾಂಬಿ ನಾಡಕಚೇರಿಯ ಉಪತಹಸೀಲ್ದಾರ್ ನಾಗೇಂದ್ರ, ದೇವಾಲಯದ ಅರ್ಚಕ ಸಮೂಹ ಮತ್ತು ಬ್ಯಾಂಕ್ ಪ್ರತಿನಿಧಿಗಳು ಇದ್ದರು.