ಮಡಿಕೇರಿ: ಮಡಿಕೇರಿ ತಾಲೂಕಿನ ಅರ್ವತ್ತೋಕ್ಲು ಗ್ರಾಮದ ಶ್ರೀ ವಿಷ್ಣಪ್ಪ ದೇವರ ವಾರ್ಷಿಕ ಹಬ್ಬ ಇತ್ತೀಚೆಗೆ ಶ್ರದ್ಧಾ ಭಕ್ತಿಯಿಂದ ಜರುಗಿತು.
ಸಹಸ್ರಮಾನಗಳ ಐತಿಹ್ಯವಿರುವ ವಿಷ್ಣಪ್ಪ ದೇವರ ಉತ್ಸವ ಭಂಡಾರ ತಕ್ಕ ಪೊಡಿಯಂಡ ಮನೆಯಿಂದ, ದುಡಿಕೊಟ್ಟು ಪಾಟಾಗಿ ಭಂಡಾರ ತಂದು ಅಂದಿ ಕೊಟ್ಟ್ ಕೊಟ್ಟುವ ಮೂಲಕ ಆರಂಭಗೊಂಡಿತು. ಪಟ್ಟಣಿ, ಭಕ್ತರ ತುಲಾಭಾರ, ಪಟ್ಟ್ ಪರಿಕೆ ಮುಗಿಸಿ, ಊರ್ ಮಂದ್‌ನಿಂದ ಊರು ತಕ್ಕ ತೆನ್ನಿರ, ನಾಡು ತಕ್ಜ ಮುಂಜಾದಿರ ಹಾಗೂ ಭಂಡಾರ ತಕ್ಕ ಪೊಡಿಯಂಡ ಒಕ್ಕದ ಎತ್ತು ಪೋರುಗಳೊಂದಿಗೆ ದೇವಾಲಯಕ್ಕೆ ತೆರಳಿ ಊರಿನ ಇತರ ಕುಳಗಳೊಂದಿಗೆ ಸೇರಿ ಪೋರ್ ಅನ್ನು ಒಪ್ಪಿಸಲಾಯಿತು.
ಮಹಾಪೂಜೆ ನಂತರ ಅನ್ನ ಸಂತರ್ಪಣೆಯೊಂದಿಗೆ ಪಟ್ಟಣಿಯನ್ನು ಕೊನೆಗೊಳಿಸಲಾಯಿತು.ಬಳಿಕ ದೇವರ ಬಿಂಬದೊಂದಿಗೆ ನೃತ್ಯ ಪ್ರದಕ್ಷಿಣೆ, ನಡೆ ಭಂಡಾರದೊಂದಿಗೆ ಪೂಜಾ ಕೈಂಕರ್ಯ ಸಮಾಪ್ತಿಗೊಳಿಸಲಾಯಿತು.
ಮರುದಿನ ಸಾಮೂಹಿಕ ಸತ್ಯನಾರಾಯಣ ಪೂಜೆ, ಗಣಪತಿ ಹಾಗೂ ಲಕ್ಷ್ಮೀ ದೇವಿಗೆ ವಿಶೇಷ ಪೂಜೆಯೊಂದಿಗೆ ಮಾಹಾಪೂಜೆ ನಡೆಯಿತು. ಸಂಜೆ ತೆಂಗಿನ ಕಾಯಿಗೆ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಪೂಜಾರಿರ ಮಾದಪ್ಪನವರು ಗುಂಡು ಹೊಡೆಯುವ ಮೂಲಕ ಹಬ್ಬದ ಸಾಂಪ್ರದಾಯಿಕ ಕಟ್ಟನ್ನು ಮುರಿದರು. ನಂತರ ದುಡಿಕೊಟ್ಟು ಪಾಟ್, ದೀಪಾರಾಧನೆಯೊಂದಿಗೆ ದೇವರ ಬಿಂಬವನ್ನು ವಸಂತ ಮಂಟಪಗಳಲ್ಲಿ ಪೂಜೆ ಸಲ್ಲಿಸಿ ದೇವಕುಂಡ್‌ಗೆ ತೆರಳಿ ಗುಳಿಗರಾಜನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ದೇವರ ಜಳಕ ಕಾರ್ಯ ಮುಗಿಸಿ ಪುಷ್ಪಾಲಂಕೃತವಾದ ಬಿಂಬವನ್ನು ಒಡ್ಡೋಲಗದೊಂದಿಗೆ ದೇವಾಲಯಕ್ಕೆ ಕರೆ ತಂದು ಹನ್ನೊಂದು ಸುತ್ತುಗಳ ನೃತ್ಯ ಪ್ರದರ್ಶನ ನಡೆಸಲಾಯಿತು. ಜೋಕಾಲಿಯಲ್ಲಿ ದೇವರನ್ನು ತೂಗಿಸಿ ವಸಂತ ಮಂಟಪದಲ್ಲಿ ವಸಂತ ಪೂಜೆ, ಮಹಾಪೂಜೆಯೊಂದಿಗೆ ಉತ್ಸವ ಅಂತ್ಯವಾಯಿತು.
ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಕರ್ನಾಟಕ ರಾಜ್ಯದ ಮಾಜಿ ಹೆಚ್ಚುವರಿ ಅಡ್ವೋಕೆಟ್ ಜನರಲ್ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ಕೊಡಗು ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜಾ ಉತ್ತಪ್ಪನವರು ಉತ್ಸವದಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತಕ್ಕ ಕುಟುಂಬದ ತೆನ್ನಿರ ಮೈನಾ, ದೇವತಕ್ಕ ಚಾತುರನ ಪದ್ಮಾನಂದ,ಭಂಡಾರ ತಕ್ಕ ಪೊಡೆಯಂಡ ಸುಬ್ಬಯ್ಯನವರು ತಕ್ಕ ಕಾರ್ಯ ನಿರ್ವಹಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕ ದೇವಿ ಪ್ರಸಾದ್, ತಂತ್ರಿಗಳಾದ ಶಂಕರ ನಾರಾಯಣ ವೈಲಾಯ, ಈಶ್ವರ ವೈಲಾಯ, ಪ್ರಕಾಶ, ಸಂದೀಪ್ ನೇತೃತ್ವದಲ್ಲಿ ಪೂಜಾ ವಿಧಿ-ವಿಧಾನ ನಡೆಸಲಾಯಿತು. ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಪೂಜಾರಿರ ಮಾದಪ್ಪ, ಉಪಾಧ್ಯಕ್ಷ ಪುತ್ತೇರಿರ ಸೋಮಯ್ಯ ನೇತೃತ್ವದಲ್ಲಿ ಆಡಳಿತ ಮಂಡಳಿಯ ಪ್ರಮುಖರಾದ ಚೆರುಮಾಡಂಡ ಸತೀಶ್ ಸೋಮಣ್ಣ, ಮುಂಜಾಂದಿರ ವಾಸು ನಾಣಯ್ಯ, ಗೋವಿಂದಮ್ಮನ ರಾಮಯ್ಯ, ಜಬ್ಬಂಡ ರಾಜೀವ್ ಬೋಪಣ್ಣ ಸೇರಿದಂತೆ ಸದಸ್ಯರು, ಊರಿನ ಮತ್ತು ಹೊರಗಿನ ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.