ಮಾಗಡಿ: ತಾಲೂಕಿನ ಇಷ್ಟಾರ್ಥ ಸಿದ್ದಿ ಶ್ರೀ ವಿನಾಯಕಸ್ವಾಮಿಯ 13ನೇ ವರ್ಷದ ಬ್ರಹ್ಮರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.
ಬ್ರಹ್ಮರಥೋತ್ಸವಕ್ಕೆ ಚಾಲನೆಗೂ ಮುನ್ನಾ ದೇವಾಲಯದಲ್ಲಿ ಹೋಮ, ಹವನ, ಸಂಕಲ್ಪ ಸೇರಿ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ಬ್ರಹ್ಮರಥೋತ್ಸಕ್ಕೆ ಪ್ರಥಮ ಪೂಜೆ ಸಲ್ಲಿಸುವ ಸಮಯದಲ್ಲಿ ನೂರಾರು ತೆಂಗಿನ ಕಾಯಿ ಒಡೆದು, ಅರಿಶಿನ, ಅಕ್ಷತೆ ಜತೆ ಒಂದು ರೂಪಾಯಿಯ ನೂರಾರು ನಾಣ್ಯಗಳನ್ನು ಪಡೆಯಲು ಭಕ್ತರು ಮುಂದಾದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ದೇವಾಲಯ ಪ್ರಸಿದ್ಧಿ ಪಡೆದಿದೆ. ಸುತ್ತಮುತ್ತಲ ನೂರಾರು ಗ್ರಾಮಸ್ಥರು ಹಾಗೂ ರಾಜ್ಯ, ಜಿಲ್ಲೆ, ತಾಲೂಕುಗಳಲ್ಲಿ ವಿವಿಧೆಡೆಗಳಿಂದ ಜನತೆ ಶುಭ ಕಾರ್ಯಗಳು ಮಾಡುವ ಮುನ್ನಾ ಇಷ್ಟಾರ್ಥ ಸಿದ್ದಿ ವಿನಾಯಕ ಸ್ವಾಮಿಗೆ ಪ್ರಥಮ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ.
ಸೀರೆ ನೇಕಾರರು ಪೂಜೆ ಸಲ್ಲಿಸದೆ ನಿರ್ಲಕ್ಷ್ಯಿಸಿದರೆ ಸೀರೆ ನೇಕಾರಿಕೆ ಮಾಡುವ ಸಮಯದಲ್ಲಿ ಸೀರೆ ಬಟ್ಟೆಯನ್ನು ಇಲಿ ಕಡಿಯುತ್ತದೆ ಎಂಬ ಸಂಪ್ರದಾಯ ಇಂದಿಗೂ ಜೀವಂತವಾಗಿದೆ. ದೇವಾಂಗದ ಸಮುದಾಯದವರು ಬ್ರಹ್ಮರಥೋತ್ಸವದ ವೇಳೆ ಕಡ್ಡಾಯವಾಗಿ ಬಂದು ಭಜನೆ ಹಮ್ಮಿಕೊಂಡು ವಿಶೇಷ ಪೂಜೆ ಸಲ್ಲಿಸಿದ ನಂತರ ಗ್ರಾಮದ ಹೊರಭಾಗದಲ್ಲಿ ಪ್ರಸಾದ ಹಂಚುತ್ತಾರೆ. ಗ್ರಾಮದಲ್ಲಿ ಯಾವುದೇ ಸಣ್ಣ, ಪುಟ್ಟ ವಿಚಾರಗಳಿಗೆ ಕಿತ್ತಾಡಿಕೊಂಡು ಒಬ್ಬರಿಗೊಬ್ಬರು ವೈಷಮ್ಯ ಸಾಧಿಸುತ್ತಿದ್ದರೆ ಈ ಇಬ್ಬರನ್ನು ಗ್ರಾಮದ ಹಿರಿಯರು ದೇವಾಲಯಕ್ಕೆ ಕರೆಸಿ ನ್ಯಾಯ ಪಂಚಾಯಿತಿ ಮಾಡಿಸಿ ಒಂದು ಗೂಡಿಸುವ ಸಂಪ್ರದಾಯಗಳು ಇಂದಿಗೂ ಇದೆ.
ನೇತೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿ, ಸಂಕಷ್ಟ ಪರಿಹರಿಸುವಂತೆ ದೇವಾಲಯಕ್ಕೆ ಬಂದು ಭಕ್ತಿಯಿಂದ ಬೇಡಿಕೊಂಡರೆ ಸಂಕಷ್ಟಗಳು ದೂರವಾಗುತ್ತದೆ, ನಾವು ಯಾವುದೇ ಶುಭಕಾರ್ಯಕ್ರಮಗಳು ಮಾಡಬೇಕಾದರೆ ಪ್ರಥಮವಾಗಿ ಈ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗುವುದು ಎಂದರು.
ಬ್ರಹ್ಮರಥೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಮಜ್ಜಿಗೆ, ಪಾನಕ, ಕೋಸಂಬರಿ, ನಿರಂತರ ಅನ್ನದಾಸೋಹ ನಡೆಯಿತು.
ಮುಖಂಡರಾದ ಯಾಲಕಪ್ಪ, ಶ್ರೀನಿವಾಸ್, ನರಸಿಂಹಮೂರ್ತಿ, ಪ್ರಮೋದ್, ಕೆಂಪೇಗೌಡ, ಪ್ರಕಾಶ್, ತಿರುಮಲೆ ರಮೇಶ್, ಆನಂದ್, ಕೃಷ್ಣಪ್ಪ, ಮಂಜುನಾಥ್, ಜಯರಾಮಯ್ಯ, ಕೋಟಿ ನಾಗರಾಜು, ನಿವೃತ್ತ ಪಿಡಿಒ ಲಕ್ಷ್ಮೀ ನಾರಾಯಣ್, ಬಾಲಕೃಷ್ಣ, ಶಿವಣ್ಣ, ಗಂಗಣ್ಣ, ವಿಜಯಕುಮಾರ್, ಮಂಜುನಾಥ್, ಅರ್ಚಕ ಶ್ರೀನಿವಾಸ್ ಇತರರು ಇದ್ದರು.
ಅಧಿಕಾರಿಗಳ ನಡೆಗೆ ಆಕ್ರೋಶ : ದೇವಾಲಯ ಮುಜುರಾಯಿ ಇಲಾಖೆಗೆ ಸೇರಿದ್ದು, ಬ್ರಹ್ಮರಥೋತ್ಸವಕ್ಕೆ ಮುಜುರಾಯಿ ಇಲಾಖೆ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಪ್ರಥಮ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ, ಈ ಭಾರಿಯ ರಥೋತ್ಸವಕ್ಕೆ ಯಾವ ಅಧಿಕಾರಿಗಳು ಪೂಜೆ ಸಲ್ಲಿಸಲಿಲ್ಲ, ಗ್ರಾಮದ ಮುಖಂಡರೆ ರಥೋತ್ಸವಕ್ಕೆ ಚಾಲನೆ ನೀಡಿದ ಪ್ರಸಂಗ ನಡೆಯಿತು.
ಮುಜುರಾಯಿ ಇಲಾಖೆ ದೇವಾಲಯದ ಹುಂಡಿಯ ಹಣವನ್ನು ಪಡೆಯಲು ಮಾತ್ರ ಸೀಮಿತವಾಗಿದ್ದು, ದೇವಾಲಯದ ಪೂಜೆಗಳು ಅವಶ್ಯಕತೆ ಇಲ್ಲದಂತಾಗಿದೆ ಎಂದು ಭಕ್ತರು ಮುಜುರಾಯಿ ಇಲಾಖೆ ಅಧಿಕಾರಿಗಳ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.