ಹನೂರು: ಪಟ್ಟಣದ ಶ್ರೀ ಆಂಜನೇಯಸ್ವಾಮಿ ದೇಗುಲದಲ್ಲಿ ಸತ್ಯನಾರಾಯಣ ಸ್ವಾಮಿ ಹಾಗೂ ಸಿರಗೋಡು ಗ್ರಾಮದ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ಸ್ವಾಮಿಗೆ ವೈಕುಂಠ ಏಕಾದಶಿ ಅಂಗವಾಗಿ ಸೋಮವಾರ ವಿಶೇಷ ಪೂಜೆ ನೆರವೇರಿದ್ದು, ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು.
ದೇಗುಲವನ್ನು ವಿವಿಧ ಪುಷ್ಪ ಹಾಗೂ ತಳಿರು ತೋರಣದಿಂದ ಸಿಂಗಾರ ಮಾಡಲಾಗಿತ್ತು. ಪಟ್ಟಣದ ಶ್ರೀ ಆಂಜನೇಯಸ್ವಾಮಿ ದೇಗುಲದಲ್ಲಿ ಬೆಳಗ್ಗೆ 5 ಗಂಟೆಯಲ್ಲಿ ದೇವರಿಗೆ ಹಾಲು, ಮೊಸರು, ಜೇನುತುಪ್ಪ, ಎಳ ನೀರು, ಸಕ್ಕರೆ ಹಾಗೂ ವಿವಿಧ ಹಣ್ಣುಗಳಿಂದ ಅಭಿಷೇಕವನ್ನು ನೆರವೇರಿಸಲಾಯಿತು. ಬಳಿಕ ಮೂರ್ತಿಯನ್ನು ಪಂಚವರ್ಣದಿಂದ ಸಿಂಗರಿಸಿ ಸುಪ್ರಭಾತ ಸೇವೆ, ಶಾತ್ತು ಮೊರೆ ಸೇವೆ ಹಾಗೂ ಅಷ್ಟೋತ್ತರ ಸೇವೆಯ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ಅರ್ಚಕ ಸುನೀಲ್ ಪೂಜಾ ಕೈಂಕರ್ಯ ನೆರವೇರಿಸಿದರು. ಆಗಮಿಸಿದ ಭಕ್ತರು ದೇವರ ದರ್ಶನ ಪಡೆದರು. ದೇಗುಲದ ವತಿಯಿಂದ ಪ್ರಸಾದ ವಿನಿಯೋಗಿಸಲಾಯಿತು.
ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇಗುಲ: ಸಿರಗೋಡು ಗ್ರಾಮದ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿಗೆ ಬೆಳಗ್ಗೆ 5ರಲ್ಲಿ ಅಭಿಷೇಕವನ್ನು ನೆರವೇರಿಸಲಾಯಿತು. ಬಳಿಕ ಮೂರ್ತಿಯನ್ನು ಚಿನ್ನದ ಕವಚದಿಂದ ಅಲಂಕರಿಸಿ ವಿವಿಧ ಪುಷ್ಪಗಳಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಹಾಮಂಗಳಾರತಿ ಬೆಳಗಿಸಿದ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಭಕ್ತರು ಸ್ವರ್ಗದ ಬಾಗಿಲಿನ ಮೂಲಕ ತೆರಳಿ ದೇವರ ದರ್ಶನ ಪಡೆದರು. ದೇಗುಲದ ಧರ್ಮಾಧಿಕಾರಿ ರಾಮಕೃಷ್ಣ ಪೂಜಾ ಕೈಂಕರ್ಯ ನೆರವೇರಿಸಿದರು. ದೇಗುಲದ ವತಿಯಿಂದ ಪ್ರಸಾದ ವಿನಿಯೋಗಿಸಲಾಯಿತು.
ಹನೂರು ಸೇರಿದಂತೆ ಉದ್ದನೂರು, ಬೆಳತ್ತೂರು, ಮಾಲಾಪುರ, ಲೊಕ್ಕನಹಳ್ಳಿ, ಮಹಾಲಿಂಗನಕಟ್ಟೆ, ಮಂಗಲ, ಆರ್.ಎಸ್ ದೊಡ್ಡಿ ಸೇರಿದಂತೆ ಈ ಭಾಗದ ಇನ್ನಿತರೆ ಗ್ರಾಮದ ಭಕ್ತರು ಆಗಮಿಸಿದ್ದರು.