ಜಿಲ್ಲೆ

ಶ್ರೀ ಮಹದೇಶ್ವರಸ್ವಾಮಿ ರಥೋತ್ಸವ

ನಂಜನಗೂಡು: ತಾಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ಮಂಗಳವಾರ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.

ಕಡಕಲಕಟ್ಟೆ ಮಹದೇಶ್ವರ ಸ್ವಾಮಿಯ ಉತ್ಸವಮೂರ್ತಿಯನ್ನು ಗ್ರಾಮದ ಹೊರವಲಯದಲ್ಲಿರುವ ಮಹದೇಶ್ವರಸ್ವಾಮಿ ದೇವಾಲಯಕ್ಕೆ ಕೊಂಡೊಯ್ದು ಕ್ಷೀರ ಅಭಿಷೇಕ, ರುದ್ರಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಗ್ರಾಮಸ್ಥರು ವಿಶೇಷ ಪೂಜೆಯನ್ನು ಸಲ್ಲಿಸಿದರು.

ಮಕ್ಕಳು ಹಾಲರವಿ ಉತ್ಸವದಲ್ಲಿ ಭಾಗವಹಿಸಿದ್ದರು. ದೇವಾಲಯದ ಮುಂಭಾಗದಲ್ಲಿ ಹಾಕಿದ್ದ ಕೊಂಡೋತ್ಸವದಲ್ಲಿ ಭಕ್ತರು ಕೊಂಡ ಹಾಯ್ದು ಹರಕೆ ತೀರಿಸಿದರು. ಬಳಿಕ ರಥೋತ್ಸವವನ್ನು ಬಣ್ಣ ಬಣ್ಣದ ಬಟ್ಟೆಗಳಿಂದ ಹಾಗೂ ವಿವಿಧ ಹೂಗಳಿಂದ ಅಲಂಕಾರ ಮಾಡಿ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಲಾಯಿತು. ಗ್ರಾಮಸ್ಥರು ಈಡುಗಾಯಿ ಹೊಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.ದೇವಾಲಯದ ಸುತ್ತಲೂ ಭಕ್ತರು ರಥವನ್ನು ಎಳೆದರು. ನವದಂಪತಿಗಳು ರಥಕ್ಕೆ ಹಣ್ಣು, ಧವನ ಎಸೆದು ಭಕ್ತಿಭಾವ ಮೆರೆದರು. ಉಘೇ ಉಘೇ ಮಾದಪ್ಪ ಎಂದು ಜಯಘೋಷದೊಂದಿಗೆ ರಥ ಎಳೆದರು. ಬಳಿಕ ರಥವು ಸ್ವಸ್ಥಾನಕ್ಕೆ ಬಂದು ತಲುಪಿತು.

ಹುಲಿ ವಾಹನೋತ್ಸವದಲ್ಲಿ ಗ್ರಾಮಸ್ಥರು ಭಾಗಿಯಾಗಿ ಹೆಗಲು ಮೇಲೆ ಹೊತ್ತುಕೊಂಡು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿದರು. ಶ್ರೀ ಕಡಕಲಕಟ್ಟೆ ಮಹದೇಶ್ವರಸ್ವಾಮಿ ಕಲಾ ಸಂಘದಿಂದ ಕುರುಕ್ಷೇತ್ರ ಎಂಬ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿತ್ತು.