ಶೃಂಗೇರಿ: ಶ್ರೀ ಮಲಹಾನಿಕರೇಶ್ವರ ಸ್ವಾಮಿ ರಥೋತ್ಸವ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಅವರ ಸಾನ್ನಿಧ್ಯದಲ್ಲಿ ಸೋಮವಾರ ವಿಜೃಂಭಣೆಯಿಂದ ನೆರವೇರಿತು.
ರಥದಲ್ಲಿದ್ದ ಶ್ರೀ ಮಲಹಾನಿಕರೇಶ್ವರ ಉತ್ಸವ ಮೂರ್ತಿಗೆ ಮಹಾಮಂಗಳಾರತಿ ನೆರವೇರಿದ ಬಳಿಕ ಮುಖ್ಯಬೀದಿಯಲ್ಲಿ ಉತ್ಸವ ಸಾಗಿತು. ಭಕ್ತರು ಶಿವನಾಮ ಸ್ಮರಿಸುತ್ತ ರಥವನ್ನು ಎಳೆದು ಶ್ರದ್ಧಾಭಕ್ತಿ ಮೆರೆದರು. ಆನೆಗಳು, ಅಶ್ವಗಳು, ತಟ್ಟಿರಾಯ, ಶ್ರೀಮಠದ ಲಾಂಛನಗಳು, ವಾದ್ಯಗೋಷ್ಠಿಗಳು, ರಂಗವಲ್ಲಿ ಚಿತ್ತಾರಗಳು ಉತ್ಸವಕ್ಕೆ ಮೆರುಗು ನೀಡಿದವು.
ಬೆಳಗ್ಗೆ ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ಲಕ್ಷ ಮಲ್ಲಿಕಾರ್ಚನೆ, ಯತಿವರ್ಯರ ಉಪಸ್ಥಿತಿಯಲ್ಲಿ ಮಹಾಮಂಗಳಾರತಿ ನೆರವೇರಿತು. ಬಳಿಕ ಉತ್ಸವ ಮೂರ್ತಿಯನ್ನು ತಂದು ಮಹಾರಥದಲ್ಲಿ ಇರಿಸಲಾಯಿತು. ಶ್ರೀ ಶಾರದಾ ಪೀಠದ ಯಾಗಶಾಲೆಯಲ್ಲಿ ಋತ್ವಿಜರಿಂದ ಮಹಾನ್ಯಾಸ ಪೂರ್ವಕ ಏಕಾದಶವಾರ ರುದ್ರಾಭಿಷೇಕ, ರುದ್ರಕ್ರಮ, ರುದ್ರತ್ರಿಸತಿ, ಶಿವ ಸಹಸ್ರ ನಾಮಾರ್ಚನೆ, ಮಹಾಮಂಗಳಾರತಿ, ಅಷ್ಟಾವಧಾನ ಸೇವೆ ಜರುಗಿತು. ಫೆ.21ರಂದು ಓಕುಳಿ ಉತ್ಸವ, ಅವಭೃತಸ್ನಾನ, ಜಗದ್ಗುರುಗಳ ಸಾನ್ನಿಧ್ಯದಲ್ಲಿ ಅತಿರುದ್ರಯಾಗದ ಪೂರ್ಣಾಹುತಿ, ಸಂಜೆ 6.30ರಿಂದ ಶ್ರೀಭವಾನೀಮಲಹಾನೀಕರೇಶ್ವರ ದೇವರ ಸಂಧಾನೋತ್ಸವ, ತೆಪ್ಪೋತ್ಸವ, ಧ್ವಜಾರೋಹಣ ಇತ್ಯಾದಿ ಧಾರ್ವಿುಕ ಕಾರ್ಯಕ್ರಮ ನೆರವೇರಲಿದೆ.