ಜಿಲ್ಲೆ

ಶ್ರೀ ಬೈಲಾಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಸಂಪನ್ನ, ವಿವಿಧೆಡೆಯಿಂದ ಜಾತ್ರೆಗೆ ಸಾವಿರಾರು ಭಕ್ತರ ಆಗಮನ, ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ

ನೆಲಮಂಗಲ: ತಾಲೂಕಿನ ಬೈರಶೆಟ್ಟಿಹಳ್ಳಿ ಪುರಾಣ ಪ್ರಸಿದ್ಧ ಶ್ರೀ ಬೈಲಾಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಸೋಮವಾರ ನೆರವೇರಿತು.

ಬಗೆಬಗೆಯ ಹೂಗಳಿಂದ ಸಿಂಗರಿಸಿದ್ದ ರಥದಲ್ಲಿ ಶ್ರೀ ಬೈಲಾಂಜನೇಯ ಸ್ವಾಮಿಯನ್ನು ಇರಿಸಿ ವಿಶೇಷ ಪೂಜೆ ಸಲ್ಲಿಸಿ. ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನೆರೆದಿದ್ದ ಸಾವಿರಾರು ಮಂದಿ ಹರ್ಷೋದ್ಘಾರದೊಂದಿದೆ ದವನ ಸಹಿತ ಬಾಳೆಹಣ್ಣುಗಳನ್ನು ಬೀರಿದರು. ದೇವಾಲಯದಲ್ಲಿ ಸರತಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದು ಪುನೀತರಾದರು.

ಸುತ್ತಮುತ್ತಲ ಗ್ರಾಮಸ್ಥರಿಂದ ಜಾತ್ರೆಗೆ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಅರವಟಿಕೆ ನಿರ್ಮಿಸಿ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಿ, ಅನ್ನಸಂತರ್ಪಣೆ ಮಾಡಿದರು.

ಜನಸಾಗರ: ಕರೊನಾ ಹಿನ್ನೆಲೆಯಲ್ಲಿ 2 ವರ್ಷ ಜಾತ್ರೆ ರದ್ದಾಗಿತ್ತು. ಹೀಗಾಗಿ ಈ ಬಾರಿ ವಿಜೃಂಭಣೆಯಿಂದ ಜರುಗಿದ ಜಾತ್ರೆ ಹಾಗೂ ರಥೋತ್ಸವವನ್ನು ವೀಕ್ಷಿಸಲು ಬೆಳಗಿನಿಂದಲೇ ನೆಲಮಂಗಲ ತಾಲೂಕು ಸೇರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು.

ಗಣ್ಯರ ಭೇಟಿ : ಜಾತ್ರಾ ಮಹೋತ್ಸವಕ್ಕೆ ಜನಪ್ರತಿನಿಧಿಗಳು, ಗಣ್ಯರು ಬೇಟಿ ನೀಡಿ ಆಂಜನೇಯಸ್ವಾಮಿ ದರ್ಶನ ಪಡೆದರು. ಮಾಜಿ ಸಚಿವ ಆಂಜನಮೂರ್ತಿ, ಶ್ರೀ ಬೈಲಾಂಜನೇಯಸ್ವಾಮಿ ಪ್ರೌಢಶಾಲೆ ಅಧ್ಯಕ್ಷ ವಿ.ರಾಮಸ್ವಾಮಿ, ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಸ್.ಮಲ್ಲಯ್ಯ, ಗ್ರಾಪಂ ಸದಸ್ಯರಾದ ಎಚ್.ಡಿ.ಹರ್ಷ, ದೇವಾಲಯದ ಪ್ರಧಾನ ಅರ್ಚಕ ಎಸ್.ವೆಂಕಟೇಶ್‌ಮೂರ್ತಿ, ಮುಖಂಡರಾದ ರಂಗಾಚಾರ್, ದಶರಥರಾಮ್, ಆದರ್ಶ, ಪಾರುಪತ್ತೆದಾರ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

ಪೊಲೀಸ್ ಬಿಗಿ ಬಂದೋಬಸ್ತ್: ಜಾತ್ರೆಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ವೃತ್ತನಿರೀಕ್ಷಕ ಪಿ.ರಾಜೀವ್, ಗ್ರಾಮಾಂತರ ಠಾಣೆಯ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಈರಮ್ಮ ಮತ್ತಿತರರು ಇದ್ದರು.