ಮಡಿಕೇರಿ : ನಾಪೋಕ್ಲು ಶ್ರೀ ಪೊನ್ನುಮುತ್ತಪ್ಪ ದೇವರ ವಾರ್ಷಿಕ ಉತ್ಸವ ವಿವಿಧ ಪೂಜಾ ಕೈಂಕರ್ಯದೊಂದಿಗೆ ಬುಧವಾರ ಸಂಪನ್ನಗೊಂಡಿತು.
ವಾರ್ಷಿಕ ಉತ್ಸವ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ 6 ಗಂಟೆಗೆ ಗಣಪತಿ ಹೋಮದೊಂದಿಗೆ ವಾರ್ಷಿಕ ಉತ್ಸವದ ಕಾರ್ಯಕ್ರಮಗಳು ಆರಂಭಗೊಂಡವು. ಮಂಗಳವಾರ ಸಂಜೆ ಮುತ್ತಪ್ಪ ದೇವರ ಕಳಸ ಪೂಜೆ ನೆರವೇರಿತು. ಕಾವೇರಿ ನದಿಯಲ್ಲಿ ಸ್ನಾನದ ನಂತರ ಮಹಿಳೆಯರಿಂದ ತಳಿಯಕ್ಕಿ ಬೊಳಕ್ ಹಾಗೂ ಕೇರಳದ ಪ್ರಖ್ಯಾತ ಚಂಡೆಯೊಂದಿಗೆ ಪಟ್ಟಣದ ಮುಖ್ಯಬೀದಿಯಲ್ಲಿ ಮೆರವಣಿಗೆ ನಡೆಯಿತು. ಭಕ್ತಾದಿಗಳಿಂದ ಹಣ್ಣುಕಾಯಿ, ಈಡು ಕಾಯಿ ಸೇವೆ ಸಲ್ಲಿಸಿದರು. ಅತ್ಯಾಕರ್ಷಕ ಪಟಾಕಿಯ ಚಿತ್ತಾರ ನೆರೆದವರನ್ನು ಮಂತ್ರ ಮಗ್ನಗೊಳಿಸಿತು. ರಾತ್ರಿ ದೇವಾಲಯದಲ್ಲಿ ಮುತ್ತಪ್ಪ ದೇವರ ಹಾಗೂ ಕುಟ್ಟಿಚಾತ ಬೊಳ್ಳಾಟಂ ಜರುಗಿತು.
ಬುಧವಾರ ಬೆಳಗ್ಗೆ ಗುಳಿಗ, ತಿರುವಪ್ಪ ಹಾಗೂ ಮುತ್ತಪ್ಪ ತೆರೆಗಳು ಜರುಗಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗೆ ಹರಕೆ ಒಪ್ಪಿಸಿ ಪ್ರಸಾದ ಸ್ವೀಕರಿಸುವುದರೊಂದಿಗೆ ಉತ್ಸವ ಸಂಪನ್ನಗೊಂಡಿತು. ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎ.ಕೆ .ಚಂದ್ರನ್ ಉಪಾಧ್ಯಕ್ಷ ಶ್ರೀಧರ ಕಾರ್ಯದರ್ಶಿ ರಾಜೀವನ್, ನಿರ್ದೇಶಕರು ಸೇರಿದಂತೆ ಗ್ರಾಮ ಹಾಗೂ ಸುತ್ತಲ ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.