ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಕಣಗಾಲು ಗ್ರಾಮದ ಶ್ರೀದಿಡ್ಡಿಯಮ್ಮ ದೇಗುಲದಲ್ಲಿ ಅರ್ಚಕರಿಂದ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಭಾನುವಾರ ಗ್ರಾಮಸ್ಥರು ತುರ್ತು ಸಭೆ ನಡೆಸಿದರು.
ಗ್ರಾಮದ ಶ್ರೀದಿಡ್ಡಿಯಮ್ಮ ದೇಗುಲದಲ್ಲಿ ಅರ್ಚಕರಾಗಿ ನೇಮಕವಾಗಿರುವ ವ್ಯಕ್ತಿಗಳು ದೇವಸ್ಥಾನಕ್ಕೆ ಸಂಬಂಧಿಸಿದ ಭೂಮಿಯನ್ನು ಗ್ರಾಮಸ್ಥರನ್ನು ನಂಬಿಸಿ, ತಮ್ಮ ಹೆಸರಿಗೆ ಖಾತೆ ಮಾಡಿಕೊಂಡಿದ್ದಲ್ಲದೆ, ಗ್ರಾಮದಲ್ಲಿ ನಾನಾತ್ವ ಬೆಳೆಸಿಕೊಂಡು ಗ್ರಾಮಸ್ಥರ ಮಾತಿಗೆ ಸರಿಯಾಗಿ ಪ್ರತಿಕ್ರಿಯೆ ಮಾಡುವುದಿಲ್ಲ. ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದರೂ ದೇಗುಲವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ಆಗಮಿಸುವಂತಹ ಭಕ್ತರ ಕೈಯಲ್ಲಿಯೇ ದೇವಸ್ಥಾನ ನಿರ್ವಹಣೆ ಮಾಡುವಂತೆ ಹೇಳುವುದು, ಅವರಿಗೆ ಸರಿಯಾಗಿ ಗೌರವ ಕೊಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಅರ್ಚಕರನ್ನು ಶ್ರೀದಿಡ್ಡಿಯಮ್ಮ ದೇವಸ್ಥಾನದಿಂದ ವಜಾಗೊಳಿಸಿ, ಬೇರೆವರನ್ನು ನೇಮಕ ಮಾಡಿಕೊಳ್ಳಲು ಗ್ರಾಮಸ್ಥರಿಗೆ ಅವಕಾಶ ಮಾಡಿಕೊಡಬೇಕು. ಈ ಸಮಸ್ಯೆ ಬಗ್ಗೆ ತಾಲೂಕಿನ ಸಚಿವರೂ ಗಮನಹರಿಸಿ, ಆದಷ್ಟು ಬೇಗ ಬಗೆಹರಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದರು.
ಗ್ರಾಮದ ಮುಖಂಡರಾದ ತಮ್ಮೇಗೌಡ, ಸ್ವಾಮಯ್ಯ, ಬೇಲೂರಯ್ಯ, ಕೆ.ಡಿ. ಮಹದೇವ , ಕೆ.ಮಹದೇವ್, ಸ್ವಾಮಿಗೌಡ, ಅಣ್ಣೇಗೌಡ, ಕುಮಾರಶೆಟ್ಟಿ, ತಿಮ್ಮೇಗೌಡ, ವಾಸು ಸೇರಿದಂತೆ ಗ್ರಾಮದ ವಿವಿಧ ಕೋಮಿನ ಮುಖಂಡರು, ಭಕ್ತರು ಇದ್ದರು.
ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆ: ಕಣಗಾಲು ಗ್ರಾಮದ ಶ್ರೀದಿಡ್ಡಿಯಮ್ಮ ದೇವಸ್ಥಾನದ ವಿಚಾರವಾಗಿ ಅಲ್ಲಿನ ಅರ್ಚಕರ ವಿರುದ್ಧ ಗ್ರಾಮಸ್ಥರು ಆರೋಪ ಮಾಡಿದ ಹಿನ್ನೆಲೆಯಲ್ಲಿ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಚರ್ಚಿಸಿದ್ದೇನೆ. ಇಲ್ಲಿ ಸಮಸ್ಯೆ ಉಂಟಾಗಿರುವ ಕಾರಣ ದೇವಸ್ಥಾನದ ಬೀಗದ ಕೀಯನ್ನು ಗ್ರಾಮ ಸಹಾಯಕರಿಗೆ ನೀಡಲಾಗಿದ್ದು, ಎಲ್ಲರಿಗೂ ಮುಕ್ತವಾಗಿ ಪೂಜೆ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಅರ್ಚಕರನ್ನು ವಜಾಮಾಡಿ ಬೇರೆಯವರನ್ನು ನೇಮಕ ಮಾಡುವ ವಿಚಾರ ಮತ್ತು ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು. ನಂತರ ಮೇಲಧಿಕಾರಿಗಳ ನಿರ್ದೇಶನದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಿಜಯವಾಣಿಗೆ ತಹಸೀಲ್ದಾರ್ ನಿಸರ್ಗ ಪ್ರಿಯಾ ಜೆ ತಿಳಿಸಿದ್ದಾರೆ.