ಮಳಖೇಡದ ಉತ್ತರಾದಿ ಮಠದಲ್ಲಿ ಶ್ರೀ ಜಯತೀರ್ಥರ ಆರಾಧನೆ ನಿಮಿತ್ತ ಸೋಮವಾರ ನೂರಾರು ಭಕ್ತರ ಜೈಘೋಷದ ಮಧ್ಯೆ ಸಂಭ್ರಮದಿಂದ ಜೋಡು ರಥೋತ್ಸವ ನಡೆಯಿತು.  
ಜಿಲ್ಲೆ

ಶ್ರೀ ಜಯತೀರ್ಥರ ರಥೋತ್ಸವ ವೈಭವ

ಮಳಖೇಡ(ಕಲಬುರಗಿ): ಕಾಗಿಣೆ ತಟದಲ್ಲಿರುವ ಉತ್ತರಾದಿ ಮಠದಲ್ಲಿ ಯತಿಕುಲ ಶ್ರೇಷ್ಠ ಶ್ರೀ ಜಯತೀರ್ಥರ ಮಧ್ಯಾರಾಧನೆ ನಿಮಿತ್ತ ಸೋಮವಾರ ಸಹಸ್ರಾರು ಭಕ್ತರ ಜೈಘೋಷಗಳೊಂದಿಗೆ ಜೋಡು ರಥೋತ್ಸವ ನೆರವೇರಿತು.

ಶ್ರೀ ಸತ್ಯಾತ್ಮತೀರ್ಥ ಶ್ರೀಪಾದರ ನೇತೃತ್ವದಲ್ಲಿ ಶ್ರೀ ಅಕ್ಷೋಭ್ಯ ತೀರ್ಥರು, ಶ್ರೀ ಜಯತೀರ್ಥರು ಹಾಗೂ ಶ್ರೀ ರಘುನಾಥ ತೀರ್ಥರ ವೃಂದಾವನಕ್ಕೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಇತರ ಕಾರ್ಯಕ್ರಮಗಳು ನಡೆದವು. ಪ್ರಾಂಗಣದಲ್ಲೇ ಶ್ರೀಗಳು ಮೂಲ ರಾಮದೇವರ ಪೂಜೆ ನೆರವೇರಿಸಿದ ಬಳಿಕ ಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡಿ ಅನುಗ್ರಹಿಸಿದರು.

ತಿರುಪತಿ ತಿರುಮಲ ವೆಂಕಟೇಶ್ವರ ದೇವಸ್ಥಾನದಿಂದ ತಂದಿದ್ದ ವಿಶೇಷ ಶೇಷವಸ್ತ್ರಗಳನ್ನು ಶ್ರೀಗಳು ಜಯತೀರ್ಥರಿಗೆ ಸಮರ್ಪಿಸಿದರು. ರಥಾಂಗ ಹೋಮದ ನಂತರ ಮಠದ ಪ್ರಾಂಗಣದಲ್ಲಿ ಜೋಡು ರಥಗಳಿಗೆ ಶ್ರೀಗಳು ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಸಹಸ್ರಾರು ಭಕ್ತರು ಜೈಘೋಷಗಳೊಂದಿಗೆ ರಥವನ್ನು ಎಳೆದು ಭಕ್ತಿಭಾವ ಮೆರೆದರು.

ಕರ್ನಾಟಕದ ವಿವಿಧ ಜಿಲ್ಲೆ ಸೇರಿ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಿಂದಲೂ ಅಸಂಖ್ಯ ಭಕ್ತರು ಭಾಗವಹಿಸಿದ್ದರು. ದಾಸರ ಹಾಡುಗಳನ್ನು ಹಾಡುತ್ತ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ದಾಸರ ವೇಷ ಧರಿಸಿದ ಭಕ್ತರು ರಥೋತ್ಸವದ ಮುಂದೆ ತಾಳ ಹಾಕುತ್ತಿರುವುದು ಗಮನ ಸೆಳೆಯಿತು.

ಉತ್ತರಾದಿ ಮಠದ 5ನೇ ಯತಿಗಳಾಗಿ ಮಧ್ವ ಸಿದ್ಧಾಂತವನ್ನು ದೇಶಾದ್ಯಂತ ಪ್ರಚುರಪಡಿಸುವ ಮೂಲಕ ಅಧ್ಯಾತ್ಮ ಲೋಕಕ್ಕೆ ಟೀಕಾಚಾರ್ಯರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಇಂತಹ ಶ್ರೇಷ್ಠ ಯತಿಗಳ ವೃಂದಾವನ ಮಳಖೇಡದ ಮಠದಲ್ಲಿ ಇರುವುದರಿಂದ ಭಕ್ತರು ದರ್ಶನ ಪಡೆದು ಕೃತಾರ್ಥರಾದರು.

ಮುಂಬೈನ ಸತ್ಯಧ್ಯಾನ ವಿದ್ಯಾಪೀಠದ ಕುಲಪತಿ ಪಂ.ವಿದ್ಯಾಸಿಂಹಾಚಾರ್ಯ ಮಾಹುಲಿ, ಮಠದ ವ್ಯವಸ್ಥಾಪಕ ಪಂ.ವೆಂಕಣ್ಣಾಚಾರ್ಯ ಪೂಜಾರ, ಪಂ.ಡಾ.ಗುರುಮಧ್ವಾಚಾರ್ಯ ನವಲಿ, ಪಂ.ಗೋಪಾಲಾಚಾರ್ಯ ಅಕಮಂಚಿ, ಪಂ.ಪ್ರಸನ್ನಾಚಾರ್ಯ ಜೋಶಿ, ಪಂ.ರಾಮಾಚಾರ್ಯ ಘಂಟಿ, ಕಮಲಾಕರ ಕುಲಕರ್ಣಿ, ವೆಂಕಟೇಶಾಚಾರ್ಯ ಕಡಿವಾಳ, ರವಿ ಲಾತೂರಕರ್, ಅಶೋಕ ಕುಲಕರ್ಣಿ, ಗಿರೀಶ ಗಲಗಲಿ, ಗುಂಡಾಚಾರ್ಯ ನರಬೋಳಿ, ಶ್ರೀನಿವಾಸಾಚಾರ್ಯ ನೆಲೋಗಿ ಇತರರಿದ್ದರು.

ಇಂದು ಉತ್ತರಾರಾಧನೆ
ಭಾನುವಾರ ಶುರುವಾಗಿರುವ ಶ್ರೀ ಜಯತೀರ್ಥರ ಆರಾಧನೆ ಮಳಖೇಡದ ಶ್ರೀ ಉತ್ತರಾದಿ ಮಠದಲ್ಲಿ ಮಂಗಳವಾರ ಸಮಾರೋಪಗೊಳ್ಳಲಿದೆ.

ಕಾಗಿಣೆಯಲ್ಲಿ ಮಿಂದೆದ್ದ ಭಕ್ತಜನ
ಮಳಖೇಡದ ಉತ್ತರಾದಿ ಮಠ ಕಾಗಿಣೆ ನದಿ ದಡದಲ್ಲಿದ್ದು, ಶ್ರೀ ಜಯತೀರ್ಥರ ಆರಾಧನೆ ಮಹೋತ್ಸವಕ್ಕೆ ಆಗಮಿಸಿದ ಭಕ್ತರು ನದಿಯಲ್ಲಿ ಮಿಂದೆದ್ದು ಪುನೀತರಾದರು. ಇದೀಗ ದಕ್ಷಿಣಾಯನ ಪರ್ವಕಾಲ. ಹೀಗಾಗಿ ಯತಿಶ್ರೇಷ್ಠರ ಪವಿತ್ರ ನೆಲದಲ್ಲಿ ಹರಿಯುತ್ತಿರುವ ಕಾಗಿಣೆಯಲ್ಲಿ ಸ್ನಾನ ಮಾಡಿದರೆ ಸರ್ವ ಪಾಪಗಳು ದೂರವಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ಬೆಳಗ್ಗೆಯಿಂದ ಅಪಾರ ಭಕ್ತರು ನದಿ ಸ್ನಾನ ಮಾಡಿ ಯತಿತ್ರಯರ ವೃಂದಾವನ ದರ್ಶನ ಪಡೆದು ಕೃತಾರ್ಥರಾದರು.

ಪೇಂಟಿಂಗ್ನಲ್ಲಿ ಟೀಕಾಚಾರ್ಯರ ಚರಿತ್ರೆ
ನೆರೆಯಿಂದ ಸಾಕಷ್ಟು ಹಾನಿಯಾಗಿದ್ದ ಮಳಖೇಡದ ಉತ್ತರಾದಿ ಮಠ ನಂತರದ ದಿನಗಳಲ್ಲಿ ಸುಸಜ್ಜಿತ ರೀತಿಯಲ್ಲಿ ಮರು ನಿರ್ಮಾಣಗೊಂಡಿದೆ. ಶ್ರೀಮಠದ ಪರಿಸರದಲ್ಲಿ ಸಾಕಷ್ಟು ಹೊಸತನ ಕಾಣಲಾಗಿದ್ದು, ಅದರಲ್ಲಿ ಆಕರ್ಷಿಸಿದ್ದು ಶ್ರೀ ಜಯತೀರ್ಥ ಜೀವನದ ಬಗೆಗಿನ ಪೇಂಟಿಂಗ್ಗಳು. ಶ್ರೀ ಜಯತೀರ್ಥರ ಮೂಲ ವೃಂದಾವನದ ಆವರಣ ಗೋಡೆಯ ಮೇಲೆ ಟೀಕಾಚಾರ್ಯರ ಬಾಲ್ಯದಿಂದ ಹಿಡಿದು ಸನ್ಯಾಸತ್ವ ಸ್ವೀಕರಿಸುವವರೆಗಿನ ಘಟನಾವಳಿಗಳನ್ನು ಬಲು ಸುಂದರವಾಗಿ ಚಿತ್ರಿಸಲಾಗಿದೆ. ಎಲ್ಲವೂ ಅರ್ಥಪೂರ್ಣವಾಗಿದ್ದು, ಒಂದು ಕ್ಷಣ ಎಲ್ಲ ಪ್ರಸಂಗಗಳು ಕಣ್ಮುಂದೆಯೇ ಬಂದಂತೆ ಭಾಸವಾಗುತ್ತದೆ.

ಮುದ್ರಾ ಪಡೆದ 5 ಸಾವಿರಕ್ಕೂ ಅಧಿಕ ಜನ
ಶ್ರೀಮನ್ನ್ಯಾಯಸುಧಾ ಮಂಗಳ ಮಹೋತ್ಸವ ಬಳಿಕ ಮಳಖೇಡದಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯುತ್ತಿದ್ದು, ಅಂದು ಬರಲು ಆಗದಿದ್ದವರು ಆರಾಧನೆ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಬೆಳಗ್ಗೆಯಿಂದಲೇ ಮುದ್ರಾಧಾರಣೆ ನಡೆಯಿತು. ಸಹಸ್ರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ಶ್ರೀಗಳಿಂದ ಮುದ್ರಾ ಪಡೆದರು. ಇನ್ನು ಮಧ್ಯಾಹ್ನ ಇನ್ನಷ್ಟು ಭಕ್ತರು ಮುದ್ರಾಧಾರಣೆ ಹಾಕಿಸಿಕೊಂಡರು. 5000ಕ್ಕೂ ಅಧಿಕ ಭಕ್ತರಿಗೆ ಶ್ರೀ ಸತ್ಯಾತ್ಮತೀರ್ಥರು ಮುದ್ರಾಧಾರಣೆ ಮಾಡಿ ಅನುಗ್ರಹಿಸಿದರು.

ಸದಾ ಹಸನ್ಮುಖಿ ಶ್ರೀ
ಶ್ರೀ ಸತ್ಯಾತ್ಮತೀರ್ಥರು ಬೆಳಗ್ಗೆಯಿಂದ ಒಂಚೂರೂ ವಿಶ್ರಾಮವಿಲ್ಲದೆ ನಿರಂತರ ಕಾರ್ಯಕ್ರಮಗಳಲ್ಲಿ ತಲ್ಲೀನರಾಗಿದ್ದರು. ನಸುಕಿನ ಜಾವ ಕಾಗಿಣೆಯಲ್ಲಿ ದಂಡೋದಕ ಸ್ನಾನ, ನಂತರ ಯತಿತ್ರಯರ ವೃಂದಾವನಗಳಿಗೆ ವಿಶೇಷ ಪೂಜೆ, ಅಸಂಖ್ಯಾತ ಭಕ್ತರಿಗೆ ಮುದ್ರಾಧಾರಣೆ, ಶ್ರೀ ಮೂಲ ರಾಮದೇವರ ಪೂಜೆ ಬಳಿಕ ಶ್ರೀ ಜಯತೀರ್ಥರ ಮೂಲ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ ಪುನಃ ಸಾವಿರಾರು ಭಕ್ತರಿಗೆ ಮುದ್ರಾಧಾರಣೆ ಮಾಡಿದರು. ಸಂಜೆಯೂ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು.

ಪಂಡಿತರಿಗೆ ಊಟ ಬಡಿಸಿದ ಶ್ರೀಗಳು
ಮಧ್ಯಾಹ್ನ ಭೋಜನ ವೇಳೆ ನೂರಾರು ಪಂಡಿತರಿಗೆ ಶ್ರೀಗಳು ಸ್ವತಃ ಬಡಿಸುವ ಮೂಲಕ ಗಮನ ಸೆಳೆದರು. ನಿರಂತರ ಚಟುವಟಿಕೆಗಳಿಂದ ಸ್ವಲ್ಪವೂ ಆಯಾಸ ಪಡದೆ ಊಟಕ್ಕೆ ಕುಳಿತ್ತಿದ್ದ ಪಂಡಿತರಿಗೆ ಪಾಯಸ ಸೇರಿ ಇತರ ಖಾದ್ಯ ಬಡಿಸಿ ಅನುಗ್ರಹ ನೀಡಿದರು.


ಗಮನಸೆಳೆದ ಭಕ್ತರ ನೃತ್ಯ
ಶ್ರೀ ಸತ್ಯಾತ್ಮತೀರ್ಥರು ಮಂಗಳಾರತಿ ಮೂಲಕ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಅಪಾರ ಭಕ್ತರು ತೇರನೆಳೆದರು. ಕೆಲವರು ರಥದ ಮುಂದೆ ದಾಸರ ಪದಗಳಿಗೆ ನೃತ್ಯ ಮಾಡಿ ಗಮನಸೆಳೆದರು. ಕೆಲವರು ದಾಸರ ವೇಷಧರಿಸಿ ತಂಬೂರಿ ಹಿಡಿದು ಕುಣಿದು ಕುಪ್ಪಳಿಸುತ್ತ ಭಕ್ತಿಸೇವೆ ಸಲ್ಲಿಸಿದರು. ದಾರಿಯುದ್ದಕ್ಕೂ ಭಕ್ತರು ಗುಂಪು-ಗುಂಪಿನಲ್ಲಿ ಕುಳಿತು ದಾಸರ ಪದಗಳನ್ನು ಹಾಡಿದರು. ರಥೋತ್ಸವದಲ್ಲಿ ಜಯರಾಯರ ನೋಡಿರೋ, ಸಜ್ಜನರೆಲ್ಲ ಜಯರಾಯ ಪಾಡಿರೋ...'ಸಾರಿ ಬದುಕಿರೋ ಟೀಕಾರಾಯರಂಘ್ರಿಯ..' `ಕಾಗಿಣೆ ತಟವಾಸ, ಮಳಖೇಡ ನಿವಾಸ' ಸೇರಿ ಸಾಕಷ್ಟು ಪದಗಳು ಮೊಳಗಿದವು.