ಚಿಕ್ಕಮಗಳೂರಿನ ಗೋಧಳಿ ಸಮಾಜದ ಆರಾಧ್ಯ ದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ೨೦ನೇ ವರ್ಷದ ಜಾತ್ರಾ ಮಹೋತ್ಸವು ನಗರದ ಮಾರ್ಕೆಟ್ ರಸ್ತೆ ಸಮೀಪ ಬುಧವಾರ ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ಸಂಭ್ರಮದಿಂದ ಸಂಪನ್ನಗೊಂಡಿತು. 
ಜಿಲ್ಲೆ

ಶ್ರೀ ಚಾಮುಂಡೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವ ಕಾರ್ಯ ಸಂಪನ್ನ

ಚಿಕ್ಕಮಗಳೂರು: ಜಿಲ್ಲಾ ಗೋಧಳಿ ಸಮಾಜದ ಆರಾಧ್ಯ ದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ೨೦ನೇ ವರ್ಷದ ಜಾತ್ರಾ ಮಹೋತ್ಸವು ನಗರದ ಮಾರ್ಕೆಟ್ ರಸ್ತೆ ಸಮೀಪ ಬುಧವಾರ ವಿವಿಧ ಪೂಜಾ ವಿಧಿವಿಧಾನಗಳೊಂದಿಗೆ ಸಂಭ್ರಮದಿಂದ ಸಂಪನ್ನಗೊಂಡಿತು.

ಕಳೆದ ಎರಡು ದಿನಗಳಿಂದ ಜಾತ್ರಾ ಮಹೋತ್ಸವ ನಡೆದಿದ್ದು ಇಂದು ಶ್ರೀ ಚಾಮುಂಡೇಶ್ವರಿ ಅಮ್ಮನವರ ಮೂರ್ತಿಯನ್ನು ಬೆಳ್ಳಿರಥದಲ್ಲಿ ಕುಳ್ಳಿರಿಸಿ ಸಂಪ್ರದಾಯ ವಾದ್ಯಗಳೊಂದಿಗೆ ನಗರದ ಪ್ರಮುಖ ರಸ್ತೆಗ ಳಲ್ಲಿ ಮೆರವಣಿಗೆ ನಡೆಸಿ ನಲ್ಲೂರು ಗ್ರಾಮದ ಕೆರೆಯಲ್ಲಿ ವಿಸರ್ಜಿಸಲಾಯಿತು.

ಈ ವೇಳೆ ಮಾತನಾಡಿದ ಗೋಧಳಿ ಸಮಾಜದ ಅಧ್ಯಕ್ಷ ಎನ್.ಲೋಕೇಶ್, ಸತತ ಎರಡು ದಶಕಗಳಿಂದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಜಾತ್ರೆಯನ್ನು ನಡೆಸಲಾಗುತ್ತಿದೆ. ಈ ಮಹೋತ್ಸವಕ್ಕೆ ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ನೂರಾರು ಭಕ್ತಾಧಿಗಳು ಆಗಮಿಸುತ್ತಾರೆ ಎಂದು ತಿಳಿಸಿದರು.

ಶ್ರೀ ಅಮ್ಮನವರ ದೇವಾಲಯ ಪೂರ್ಣಗೊಳಿಸುವ ನಿಟ್ಟಿನಲ್ಲಿ ದಾನಿಗಳು, ಸಮಾಜದ ಬಂಧುಗಳ ಸಹ ಕಾರದಿಂದ ಶೇ. ೪೦ರಷ್ಟು ಕಟ್ಟಡವನ್ನು ನಿರ್ಮಿಸಲಾಗಿದೆ. ಉಳಿದಂತೆ ಶೇ. ೬೦ರಷ್ಟು ಕಟ್ಟಡ ಪೂರ್ಣಕ್ಕೆ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಕೈಜೋಡಿಸಿದರೆ ಆರ್ಥಿಕವಾಗಿ ಹಿಂದುಳಿದಿರುವ ಸಮಾಜಕ್ಕೆ ಬಹಳಷ್ಟು ಸಹಾಯವಾಗಲಿದೆ ಎಂದು ಹೇಳಿದರು.

ಪ್ರಸ್ತುತ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ದೇವಾಲಯ ಅಭಿವೃದ್ದಿಗೆ ೫ ಲಕ್ಷ ರೂ.ಗಳ ದೇಣಿಗೆ ನೀ ಡಿದ್ದಾರೆ. ಉಳಿದಂತೆ ಕ್ಷೇತ್ರದ ಜನಪ್ರತಿನಿಧಿಗಳು ದೇವಾಲಯ ಕಟ್ಟಡವನ್ನು ಸಂಪೂರ್ಣಗೊಳಿಸಲು ಸಹಕರಿಸಿದರೆ ಗೋಧಳಿ ಸಮಾಜದ ಬಂಧುಗಳು ಚಿರಋಣಿಯಾಗಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಮಾಜದ ಗೌರವಾಧ್ಯಕ್ಷ ಅಶೋಕ್, ಉಪಾಧ್ಯಕ್ಷ ಮಂಜುನಾಥ್ ಕೋಸಲೆ, ಹಿರಿಯ ಸದಸ್ಯ ಮಾದೇವ್‌ ಮೋರ್ಖರ್, ಸದಸ್ಯರಾದ ಗೋಪಿ ಬಾಗಲೆ, ಶ್ರೀನಿವಾಸ್ ವಾಕೋಡೆ, ನಾರಾಯಣ್ ಬೋಸಲೆ, ರಘು ಅಟಾಕ್ ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.