ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ನಿಮ್ಮ ಕಾರ್ ಪಾರ್ಕಿಂಗ್ ಇಲ್ಲೇ ಮಾಡಿ, ಚಪ್ಪಲಿ ಇಲ್ಲೇ ಬಿಡಿ, ಪೂಜೆ ಸಾಮಾನು ತಗೋಳಿ, ಅಯ್ಯೋ ಬರೀ ಕೈಲಿ ಹೋಗ್ತಿದೀರಲ್ಲ, ಒಂದು ಮೊಳ ಹೂವು ಆದ್ರೂ ತಗೋಳಿ, ಅರೆ ಪೂಜೆ ಸಾಮಾನು ಬೇಡ್ವಾ, ನಿಮ್ಮ ಕಾರು ಎತ್ತಿ, ದೂರದಿಂದ ಬರ‌್ತೀರಾ, ಕಡ್ಡಿ ಕರ್ಪೂರ ತಗೋಳೋಕೆ ಏಕೆ ಮುಖ ನೋಡ್ತೀರಾ....!
ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಭಕ್ತರಿಗೆ ಎದುರಾಗುವ ಕಿರಿಕಿರಿಯ ಪರಿ ಇದು..!
ಹೌದು. ಪವಿತ್ರ ನಾಗಾರಾಧನೆ ಕ್ಷೇತ್ರವಾಗಿರುವ ಘಾಟಿದಲ್ಲಿ ಪೂಜಾ ಸಾಮಗ್ರಿ ಮಾರುವ ಬೀದಿಬದಿ ವ್ಯಾಪಾರಿಗಳ ಕಾಟ ಮೇರೆ ಮೀರಿದೆ. ಇಲ್ಲಿಗೆ ಬರುವ ಭಕ್ತರು ವ್ಯಾಪಾರಿಗಳ ಕಾಟಕ್ಕೆ ಹೈರಾಣಾಗಿದ್ದಾರೆ. ಪ್ರತಿನಿತ್ಯ ವ್ಯಾಪಾರಿಗಳು-ಭಕ್ತರ ನಡುವೆ ಜಟಾಪಟಿ ಸಾಮಾನ್ಯವಾಗಿದೆ. ಬೀದಿ ವ್ಯಾಪಾರಿಗಳ ಮೂದಲಿಕೆ, ಹೀಯಾಳಿಕೆಗೆ ಭಕ್ತರು ಬೇಸತ್ತಿದ್ದಾರೆ. ಈ ಅವ್ಯವಸ್ಥೆಗೆ ಕಡಿವಾಣ ಹಾಕಬೇಕಾದ ದೇಗುಲ ಆಡಳಿತ ಮಂಡಳಿ ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬ ಧೋರಣೆಗೆ ಅಂಟಿ ಕುಳಿತಿದೆ.
ಚಪ್ಪಲಿ ಬಿಡುವಂತೆ ಕಾಟ: ಘಾಟಿ ದೇಗುಲ ಪ್ರವೇಶದ್ವಾರದ ಉದ್ದಕ್ಕೂ 50ಕ್ಕೂ ಹೆಚ್ಚು ಪೂಜಾ ಸಾಮಗ್ರಿ ಅಂಗಡಿಗಳಿದ್ದು, ಭಕ್ತರಿಗೆ ಅಂಗಡಿಗಳ ಪಕ್ಕ ಚಪ್ಪಲಿ ಬಿಡುವಂತೆ ನಯವಾಗಿ ಒತ್ತಾಯಿಸುತ್ತಾರೆ. ಚಪ್ಪಲಿ ಬಿಡುತ್ತಿದ್ದಂತೆ ಭಕ್ತರ ಕೈಗೆ ಪೂಜಾ ಸಾಮಗ್ರಿ ತಟ್ಟೆಗಳನ್ನಿಡುತ್ತಾರೆ, ಬೇಕೋ ಬೇಡವೋ ಎಂದು ಕೇಳುವ ಗೋಜಿಗೂ ಹೋಗುವುದಿಲ್ಲ, ಒಂದು ವೇಳೆ ಭಕ್ತರು ನಿರಾಕರಿಸಿದರೆ ಹಾಗಿದ್ರೇ ನಿಮ್ಮ ಚಪ್ಪಲಿ ತಗೊಂಡೋಗಿ ಎಂದು ಮೂದಲಿಸುತ್ತಾರೆ, ಇದ್ದಕ್ಕಿದ್ದಂತೆ ಬದಲಾದ ವ್ಯಾಪಾರಿಗಳ ವರ್ತನೆಗೆ ಭಕ್ತರು ಬೆದರಿಹೋಗುತ್ತಾರೆ.
ದುಬಾರಿ ದರ: ಒಂದೊಂದು ಅಂಗಡಿಗಳಲ್ಲೂ ಒಂದೊಂದು ದರ ನಿಗದಿ ಮಾಡಲಾಗಿದೆ. ಭಕ್ತರ ಮುಖ ನೋಡಿ ದರದ ಏರಿಳಿಕೆಯಾಗುತ್ತದೆ. ಸಾಮಾನ್ಯವಾಗಿ ಅಷ್ಟೇ ಸಾಮಗ್ರಿಗಳನ್ನು ಹೊರಗೆ ಖರೀದಿಸಿದರೆ ಎಷ್ಟು ದರವಿರುತ್ತದೋ ಅದಕ್ಕೆ ದುಪ್ಪಟ್ಟು ದರ ನೀಡಬೇಕಾಗುತ್ತದೆ. ದರದ ಬಗ್ಗೆ ಚೌಕಾಸಿ ಮಾಡಿದರೂ ವ್ಯಾಪಾರಿಗಳ ಮೂದಲಿಕೆೆ ಎದುರಿಸಬೇಕಾಗುತ್ತದೆ.
ಕೈ ಹಿಡಿದೂ ಎಳೀತಾರೆ!: ದೇಗುಲ ಪ್ರವೇಶದ್ವಾರದ ಎರಡೂ ಬದಿ ವ್ಯಾಪಾರಿಗಳು ಭಕ್ತರ ಮೇಲೆ ಅಕ್ಷರಶಃ ದಾಳಿ ಮಾಡುತ್ತಾರೆ, ನಮ್ಮತ್ರ ತಗೋಳಿ, ನಮ್ಮತ್ರ ತಗೋಳಿ ಎಂದು ಗಂಟುಬೀಳುತ್ತಾರೆ, ಕೆಲವರಂತೂ ಭಕ್ತರ ಕೈಹಿಡಿದು ಜಗ್ಗಿ ದಬ್ಬಾಳಿಕೆ ಮಾಡುತ್ತಾರೆ, ಕೈಬಿಡಿಸಿಕೊಂಡು ಓಡಿಹೋಗುವ ಅನಿವಾರ್ಯತೆ ಭಕ್ತರದ್ದಾಗಿದೆ. ಅಷ್ಟಕ್ಕೂ ಬಿಡದ ವ್ಯಾಪಾರಿಗಳು ಭಕ್ತರ ಬೆನ್ನಟ್ಟಿ ಬರುತ್ತಾರೆ, ಇವರಿಂದ ತಪ್ಪಿಸಿಕೊಳ್ಳುವಷ್ಟರಲ್ಲಿ ಯಾವುದೋ ಯುದ್ಧ ಭೂಮಿಯಿಂದ ಪಾರಾದ ಸನ್ನಿವೇಶ ಎದುರಿಸಬೇಕಾಗಿದೆ.
ಅಡ್ಡಾದಿಡ್ಡಿ ಪಾರ್ಕಿಂಗ್: ಕ್ಷೇತ್ರಕ್ಕೆ ಬರುವ ವಾಹನಗಳಿಗೆ ವಿಸ್ತಾರವಾದ ಪಾರ್ಕಿಂಗ್ ಪ್ರದೇಶ ನಿರ್ಮಾಣ ಮಾಡಿದ್ದರೂ ವ್ಯಾಪಾರಿಗಳು ವಾಹನಗಳನ್ನು ಅಲ್ಲಿಗೆ ತಲುಪಲು ಬಿಡುವುದೇ ಇಲ್ಲ, ಇವರ ಒತ್ತಾಯಕ್ಕೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದು, ವಿನಾಕಾರಣ ವಾಹನದಟ್ಟಣೆ ಏರ್ಪಡುತ್ತಿದೆ. ಅಡ್ಡಾದಿಡ್ಡಿ ಪಾರ್ಕಿಂಗ್‌ನಿಂದ ಬಿಎಂಟಿಸಿ, ಕೆಸ್ಸಾರ್ಟಿಸಿ ಬಸ್‌ಗಳು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ.
ದೇವಸ್ಥಾನ ಒಳಗಡೆಯ ಉಸ್ತುವಾರಿಯಷ್ಟೆ ನಮ್ಮ ವ್ಯಾಪ್ತಿಗೆ ಬರುತ್ತದೆ, ಬೀದಿ ಬದಿ ವ್ಯಾಪಾರಿಗಳಿಂದಾಗುತ್ತಿರುವ ಕಿರಿಕಿರಿ ಬಗ್ಗೆ ಸ್ಥಳೀಯ ಪೊಲೀಸರೊಂದಿಗೆ ಮಾತನಾಡಲಾಗುವುದು, ಇನ್ನು ಮುಂದೆ ಇಂಥ ಪರಿಸ್ಥಿತಿ ಪುನರಾವರ್ತನೆಯಾಗದಂತೆ ಎಲ್ಲರಿಗೂ ಎಚ್ಚರಿಕೆ ನೀಡಿ ಅಗತ್ಯ ಕ್ರಮಕೈಗೊಳ್ಳಲಾಗುವುದು. ನಾಗರಾಜ್, ದೇಗುಲ ಕಾರ್ಯನಿರ್ವಾಹಕ ಅಧಿಕಾರಿ ವ್ಯಾಪಾರಿಗಳು ಭಕ್ತರನ್ನು ತಡೆದು ಅವರ ಚಪ್ಪಲಿಗಳನ್ನು ಅಲ್ಲಿಯೇ ಬಿಡುವಂತೆ ಒತ್ತಾಯಿಸುವುದರಿಂದ ಚಪ್ಪಲಿ ಸ್ಟಾಂಡ್‌ನಲ್ಲಿ ಚಪ್ಪಲಿ ಬಿಡುವವರೇ ಇಲ್ಲವಾಗಿದೆ. ಟೆಂಡರ್ ತೆಗೆದುಕೊಂಡಿದ್ದರೂ ನಾವು ನಷ್ಟ ಎದುರಿಸಬೇಕಾಗಿದೆ, ಕೇಳಲು ಹೋದರೆ ಜಗಳಕ್ಕೆ ಬರುತ್ತಾರೆ. ಹೆಸರೇಳಲಿಚ್ಛಿಸದ ದೇಗುಲದ ಚಪ್ಪಲಿ ಸ್ಟಾಂಡ್ ಕೆಲಸಗಾರ