ಜಿಲ್ಲೆ

ಶ್ರೀ ಗುರುಮಲ್ಲೇಶ್ವರ ಭಿಕ್ಷದ ದಾಸೋಹ ಹಳೇ ಮಠದ ಜೀರ್ಣೋದ್ಧಾರ

ಹನೂರು: ತಾಲೂಕಿನ ಪಿ.ಜಿ ಪಾಳ್ಯ ಗ್ರಾಮದ ಶ್ರೀ ಗುರುಮಲ್ಲೇಶ್ವರ ಭಿಕ್ಷದ ದಾಸೋಹ ಹಳೇ ಮಠದ ಜೀರ್ಣೋದ್ಧಾರವನ್ನು ಮೈಸೂರಿನ ಕುದೇರು ಮಠದ ಶ್ರೀ ಇಮ್ಮಡಿ ಗುರುಲಿಂಗ ಸ್ವಾಮೀಜಿ ಅವರ ನೇತೃತ್ವದಲ್ಲಿ ಗುರುವಾರ ನೆರವೇರಿಸಲಾಯಿತು.

ಮಠವನ್ನು ತಳಿರು, ತೋರಣ, ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ 5 ರಿಂದ 6ರವರೆಗೆ ಸಲ್ಲುವ ಶುಭ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಇಮ್ಮಡಿ ಗುರುಲಿಂಗ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಶ್ರೀ ಮಠದ ಪ್ರವೇಶ ಮಾಡಲಾಯಿತು. ಬಳಿಕ ಗಣಪತಿ ಪೂಜೆ, ಗುರುಕಳಸ ಪೂಜೆ, ಅಗ್ನಿ ಪ್ರತಿಷ್ಠಾಪನೆ ಹಾಗೂ ಇತರ ಧಾರ್ಮಿಕ ಪೂಜೆ ಕೈಂಕರ್ಯಗಳು ನೆರವೇರಿದವು. ಸಂಜೆ 5ಕ್ಕೆ ಕುದೇರು ಮಠಾಧ್ಯಕ್ಷ ಶ್ರೀ ಗುರುಶಾಂತ ಸ್ವಾಮೀಜಿ ಅವರಿಗೆ ಪಾದಪೂಜೆ ನೆರವೇರಿಸಲಾಯಿತು. ಈ ವೇಳೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಶ್ರೀಗಳ ಆಶೀರ್ವಾದ ಪಡೆದರು. ಇಮ್ಮಡಿ ಗುರುಲಿಂಗ ಸ್ವಾಮೀಜಿ, ಗೋಪಿಶೆಟ್ಟಿಯೂರು ಪಟ್ಟದ ಮಠದ ಬಸವಣ್ಣ ಸ್ವಾಮೀಜಿ, ಚಿಕ್ಕಿಂದುವಾಡಿ ಮಠದ ಬಾಲ ಷಡಕ್ಷರ ಸ್ವಾಮೀಜಿ ಸಮ್ಮುಖದಲ್ಲಿ ಸಾಮೂಹಿಕ ಲಿಂಗಧಾರಣೆ ಕಾರ್ಯಕ್ರಮ ನಡೆಯಿತು. ಮಠದ ವತಿಯಿಂದ ಕರಡಿಗ, ಲಿಂಗ ಹಾಗೂ ಶಿವದಾರವನ್ನು ವಿತರಿಸಲಾಯಿತು.

ಸುಮಾರು 70ಕ್ಕೂ ಹೆಚ್ಚು ಭಕ್ತರಿಗೆ ಲಿಂಗಧಾರಣೆ ನಡೆಯಿತು. ಉಡಿಗಾಲದ ಶ್ರೀ ಶರಣೆ ನೀಲಾಂಬಿಕ ಮಹಿಳಾ ಭಜನಾ ಸಂಘ ಹಾಗೂ ಸ್ಥಳೀಯ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಇಂದು ಧಾರ್ಮಿಕ ಕಾರ್ಯಕ್ರಮ:

ಏ.18 ರಂದು ಬೆಳಗ್ಗೆ 7 ಗಂಟೆಗೆ ಷಟ್ಸ್ಥಳ ಧ್ವಜಾರೋಹಣ, ಶ್ರೀಮಠದ ಬಸವ ಉದ್ಘಾಟನೆ ಹಾಗೂ ಶಿವ ಪಾರ್ವತಿ ವಿಗ್ರಹ ಅನಾವರಣಗೊಳ್ಳಲಿದೆ. 10 ಗಂಟೆಗೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಲಿದ್ದಾರೆ. ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸಮುಖದಲ್ಲಿ ಕನಕಪುರ ಮರಳೆಗವಿ ಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ ಅವರು ಮಠದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕುದೇರು ಮಠದ ಗುರುಶಾಂತ ಸ್ವಾಮೀಜಿ ವಹಿಸಲಿದ್ದಾರೆ. ಶ್ರೀರಂಗಪಟ್ಟಣ ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶ್ರೀಗಳ ಭಾವಚಿತ್ರವನ್ನು ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಗುಂಡ್ಲುಪೇಟೆ ಶಿವಪೂಜಾ ಮಠದ ಶ್ರೀ ಚನ್ನವೀರ ಸ್ವಾಮೀಜಿ ಅವರು ಅನಾವರಣಗೊಳಿಸಲಿದ್ದಾರೆ.