filter: 0; fileterIntensity: -0.01; filterMask: 0; brp_mask:0; brp_del_th:null; brp_del_sen:null; delta:null; module: night;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 49; 
ಜಿಲ್ಲೆ

ಶ್ರೀ ಗುಡಿಹಟ್ಟಿ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿ

ಬಾಲಮುರಳಿಕೃಷ್ಣ

ಹನೂರು: ಈ ಭಾಗದಲ್ಲಿ ಚಿಕ್ಕ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಸಮೀಪದ ಬೂದುಬಾಳು ಗ್ರಾಮದ ಶ್ರೀ ಗುಡಿಹಟ್ಟಿ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವವು ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ನಾಲ್ಕು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ದೇಗುಲ ಸೇರಿದಂತೆ ಗ್ರಾಮದ ಪ್ರಮುಖ ಬೀದಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ರಥೋತ್ಸವದ ಹಿನ್ನೆಲೆಯಲ್ಲಿ ಬೆಳಗ್ಗೆ ದೇಗುಲದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ತೇರನ್ನು ವಿವಿಧ ಪುಷ್ಪ ಹಾಗೂ ಬಣ್ಣ ಬಣ್ಣದ ಬಟ್ಟೆಗಳಿಂದ ಸಿಂಗಾರ ಮಾಡಲಾಗಿತ್ತು. ಈ ಬಾರಿ ತೇರಿಗೆ ನೂತನ ಚಕ್ರವನ್ನು ಅಳವಡಿಸಿದ್ದರಿಂದ ಬೆಳಗ್ಗೆ 10.20ರಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು 3 ಸುತ್ತು ಪ್ರದಕ್ಷಿಣೆ ಹಾಕಿಸಿ ತೇರಿನಲ್ಲಿ ಕೂರಿಸಿ ಪೂಜೆ ಸಲ್ಲಿಸಿ ತುಸು ದೂರ ಚಲಿಸಲಾಯಿತು.

11.30ರಲ್ಲಿ ಸಿಂಗಾನಲ್ಲೂರು ಗ್ರಾಮಸ್ಥರು ಹಾಗೂ ದೇವರುಗುಡ್ಡರು ನಾರಾಯಣಸ್ವಾಮಿ, ಆಂಜನೇಯಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಉತ್ಸವ ಮೂರ್ತಿಯನ್ನು ಹೊತ್ತು ಕಂಡಾಯ, ಸತ್ತಿಗೆ ಸೂರಿಪಾನಿ, ಜಾಗಟೆ ಸದ್ದು ಹಾಗೂ ವಾದ್ಯಮೇಳದೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ತೇರಿಗೆ ಪೂಜೆಯನ್ನು ಸಲ್ಲಿಸಿದರು. 11.58ರಲ್ಲಿ ಗರುಡವೊಂದು ಪ್ರದಕ್ಷಿಣೆ ಹಾಕಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನೆರೆದಿದ್ದ ಸಾವಿರಾರು ಭಕ್ತರು ವೆಂಕಟರಮಣಸ್ವಾಮಿ ಗೋವಿಂದ ಗೋವಿಂದಾ... ಜಯಘೋಷವನ್ನು ಮೊಳಗಿಸಿ ತೇರನ್ನು ಎಳೆಯುವುದರ ಮೂಲಕ ಭಕ್ತಿ ಭಾವ ಮೆರೆದರು.

ಹಣ್ಣು, ಧವನ ಎಸೆದು ಪ್ರಾರ್ಥಿಸಿಕೊಂಡರು. ದೇವರಗುಡ್ಡರು ಜಾಗಟೆ ಸದ್ದನ್ನು ಮಾಡುತ್ತಾ, ಶಂಖವನ್ನು ಊದುತ್ತಾ ಭಕ್ತಿ ಪರವಶವಾದರು. ಈ ಮೂಲಕ ಬ್ರಹ್ಮ ರಥೋತ್ಸವವು ವಿಜೃಂಭಣೆಯಿಂದ ಜರುಗಿತು. ಜಾತ್ರೆಗೆ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದು ಹಣ್ಣು, ಕಾಯಿ ನೀಡಿ ಪೂಜೆ ಸಲ್ಲಿಸಿದರಲ್ಲದೇ ಕೆಲ ಭಕ್ತರು ಮುಡಿಸೇವೆಯನ್ನು ನೆರವೇರಿಸಿದರು.

ಮಜ್ಜಿಗೆ, ಪಾನಕ, ವಿತರಣೆ: ಜಾತ್ರೆಗೆ ಆಗಮಿಸಿದ ಭಕ್ತರಿಗೆ ಗ್ರಾಮಸ್ಥರು ವೀರಾಂಜನೇಯಸ್ವಾಮಿ ದೇಗುಲ ಸೇರಿದಂತೆ ಗ್ರಾಮದ ಬಹುತೇಕ ಕಡೆಗಳಲ್ಲಿ ಮಜ್ಜಿಗೆ ಪಾನಕ, ಪ್ರಸಾದವನ್ನು ವಿತರಿಸಿದರು. ರಥೋತ್ಸವದಲ್ಲಿ ಚಾಮರಾಜನಗರ ಸೇರಿದಂತೆ ಮಂಡ್ಯ, ಮಳವಳ್ಳಿ, ಹಲಗೂರು, ಕೊಳ್ಳೇಗಾಲ, ಕುರಟ್ಟಿಹೊಸೂರು, ದಂಟಳ್ಳಿ, ಮಾರ್ಟಳ್ಳಿ, ರಾಮಾಪುರ, ಕೌದಳ್ಳಿ, ಶಾಗ್ಯ, ಒಡೆಯರಪಾಳ್ಯ, ಲೊಕ್ಕನಹಳ್ಳಿ, ಭೈರನತ್ತ, ಹನೂರು, ಕಣ್ಣೂರು ,ಮಂಗಲ, ಹಾಗೂ ತಾಲೂಕಿನ ಇನ್ನಿತರ ಕಡೆಗಳಿಂದ ಹೆಚ್ಚಿನ ಸಂಖೆಯಲ್ಲಿ ಭಕ್ತರು ಆಗಮಿಸಿದ್ದರು. ಡಿವೈಎಸ್ಪಿ ಧರ್ಮೇಂದ್ರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.