ಶನಿವಾರಸಂತೆ: ಶನಿವಾರಸಂತೆ ಶ್ರೀ ಮಂಜುನಾಥೇಶ್ವರಸ್ವಾಮಿ ಪಾದಯಾತ್ರೆ ಸಮಿತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ 25ನೇ ವರ್ಷದ ಪಾದಯಾತ್ರೆಗೆ ಬುಧವಾರ ಚಾಲನೆ ನೀಡಲಾಯಿತು.
ಬೆಳಗ್ಗೆ 9 ಗಂಟೆಗೆ ಪಾದಯಾತ್ರಿಗಳು ಪಟ್ಟಣದ ಮುಖ್ಯರಸ್ತೆಯಲ್ಲಿ ಶ್ರೀ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಪಾದಯಾತ್ರೆ ಸಮಿತಿಗೆ 25 ವರ್ಷವಾಗಿರುವ ಹಿನ್ನೆಲೆಯಲ್ಲಿ ಕಳಸ ಹೊತ್ತ ಮಹಿಳೆಯರು ಗಣಪತಿ ದೇವಸ್ಥಾನದಿಂದ ಪಟ್ಟಣದ ಮುಖ್ಯರಸ್ತೆ ಮೂಲಕ ಕೆಆರ್‌ಸಿ ವೃತ್ತದಲ್ಲಿರುವ ಬನ್ನಿಮಂಟಪದವರೆಗೆ ಮೆರವಣಿಗೆ ಮೂಲಕ ಪಾದಯಾತ್ರಿಗಳನ್ನು ಬೀಳ್ಕೊಟ್ಟರು. ಪಾದಯಾತ್ರೆ ತಂಡದಲ್ಲಿ ಪುರುಷರು, ಮಹಿಳೆಯರು ಮಕ್ಕಳು ಸೇರಿದಂತೆ ನೂರಾರು ಜನರು ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದರು.
ಶನಿವಾರಸಂತೆ, ಚಂಗಡಹಳ್ಳಿ, ಉಚ್ಚಂಗಿ, ವಣಗೂರು, ಕೂಡುರಸ್ತೆ, ಬಿಸ್ಲೆ, ಸುಬ್ರಮಣ್ಯ ಮಾರ್ಗವಾಗಿ ಕಡಬ ರಸ್ತೆ, ಮಾರ್ದಾಳ ಇಂಜಿಲಂಪಾಡಿ ಹೊಳೆ, ಕೊಕ್ಕಡ, ಸೌತಡ್ಕ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿರುವುದಾಗಿ ಸಮಿತಿಯ ಮುಖ್ಯಸ್ಥ ಎ.ಡಿ.ಮೋಹನ್‌ಕುಮಾರ್ ಮಾಹಿತಿ ನೀಡಿದರು.