ಜಿಲ್ಲೆ

ಶ್ರೀ ಉಮಾಮಹೇಶ್ವರ ಪ್ರತಿಷ್ಠಾಪನೆ ಸಂಪನ್ನ

ಬೆಂಗಳೂರು ಗ್ರಾಮಾಂತರ ಡೆಸ್ಕ್

ನೆಲಮಂಗಲ ಶಾಸಕ ಎನ್.ಶ್ರೀನಿವಾಸ್‌ರಿಂದ ಪೂಜೆ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ವೀರನಂಜೀಪುರದ ಶ್ರೀ ಉಮಾಮಹೇಶ್ವರ ದೇವಾಲಯದಲ್ಲಿ ಶ್ರೀ ಉಮಾಮಹೇಶ್ವರ ಹಾಗೂ ಶ್ರೀಭದ್ರಕಾಳಿ ಅಮ್ಮನವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.
ಬೆಂಗಳೂರಿನ ಶ್ರೀ ರವಿಭಟ್ಟರ್ ಗುರೂಜಿ ನೇತೃತ್ವದ ಆಗಮಿಕರ ತಂಡ ಶಾಸ್ತ್ರೋಕ್ತವಾಗಿ ಕುಂಭಾಭಿಷೇಕ ನೆರವೇರಿಸಿತು. ಆಶ್ವಿಜ ಶುದ್ಧ ಪೌರ್ಣಿಮೆ ಹಿನ್ನೆಲೆ ದೇವಿಗೆ ಪುನರ್ ಪ್ರತಿಷ್ಠಾಪನೆ, ಅಷ್ಠಭಂದ ಪುನರ್ ಪ್ರತಿಷ್ಠೆ, ಕಲಶಾಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯ ನೆರವೇರಿಸಲಾಯಿತು. ಸುತ್ತಮುತ್ತಲ ಹತ್ತಾರು ಗ್ರಾಮಗಳ ಭಕ್ತರು ಸೇರಿ ತಾಲೂಕಿನ ಸಹಸ್ರಾರು ಮಂದಿ ಪಾಲ್ಗೊಂಡು ದೇವಿಯ ದರ್ಶನ ಪಡೆದರು. ದೇವಾಲಯ ಹಾಗೂ
ಭಕ್ತರ ಸಹಕಾರದಿಂದ ಪ್ರಸಾದದ ವ್ಯವಸ್ಥೆ ಮಾಡಲಾಯಿತು.
ಶಾಸಕ ಎನ್.ಶ್ರೀನಿವಾಸ್ ಪೂಜೆ ಸಲ್ಲಿಸಿ ಮಾತನಾಡಿ, ಪ್ರಾಚೀನ ಕಾಲದಿಂದಲೂ ಜನರು ದೇವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಕಾಲಕಾಲಕ್ಕೆ ಹಿರಿಯರು ನೀಡಿದ ಮಾರ್ಗ ದರ್ಶನದಂತೆ ಕಾರ್ಯನಿರ್ವಹಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಶ್ರೀ ಉಮಾ ಮಹೇಶ್ವರ ಹಾಗೂ ಶ್ರೀ ಭದ್ರಕಾಳಿ ಅಮ್ಮನವರು ಕ್ಷೇತ್ರದ ಜನರಿಗೆ ಆರೋಗ್ಯ, ಐಶ್ವರ್ಯ ಸಕಲ ಸಂಪತ್ತು ಕರುಣಿಸಲಿ ಎಂದರು.

ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಮುನಿರಾಜು ಮಾತನಾಡಿ, ಉಮಾಮಹೇಶ್ವರ ಹಾಗೂ ಭದ್ರಕಾಳಿ ಅಮ್ಮನವರು ಈ ಭಾಗದ ಜನರ ಆರಾಧ್ಯ ದೈವವಾಗಿದೆ. ಬೊಮ್ಮನಹಳ್ಳಿ, ವೀರನಂಜೀಪುರ ಸೇರಿ ಸುತ್ತಮುತ್ತಲ ಗ್ರಾಮಸ್ಥರ ಸಹಕಾರದಿಂದ ದೇವಾಲಯ ಪುನರ್ ಪ್ರತಿಷ್ಠಾಪನೆ ಮಾಡಲಾಗಿದೆ ಎಂದರು. ಗ್ರಾಪಂ ಸದಸ್ಯ ಅಂಜಿನಪ್ಪ, ರಾಜಣ್ಣ, ಬ್ಲಾಕ್ ಅಧ್ಯಕ್ಷ ಜಗದೀಶ್, ಮುಖಂಡ ಬಸವರಾಜು, ಕೆ.ಕೃಷ್ಣಪ್ಪ, ಚಿಕ್ಕಣ್ಣ, ಕಾಚನಹಳ್ಳಿ ಮನು ಮತ್ತಿತರರು ಉಪಸ್ಥಿತರಿದ್ದರು.